ದಾವಣಗೆರೆ: ಬ್ಯೂಟಿ ಪಾರ್ಲರ್ ಅಂದ್ರೆ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ತಾಣ. ಆದ್ರೆ ಕೊರೊನಾ ಹಿನ್ನೆಲೆ ಮತ್ತೊಬ್ಬರ ಸೌಂದರ್ಯವನ್ನು ಹೆಚ್ಚಿಸುವ ಬ್ಯೂಟಿಷಿಯನ್ಗಳ ಬದುಕು ಬೀದಿಗೆ ಬಂದಿದ್ದು ಇವರ ಗೋಳು ಹೇಳತೀರದಾಗಿದೆ.
ಬ್ಯೂಟಿಷಿಯನ್ಗಳ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ದಾವಣಗೆರೆ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ಗಳಿವೆ. 1,500 ಕ್ಕೂ ಹೆಚ್ಚು ಕುಟುಂಬಗಳು ಈ ಉದ್ಯೋಗದಿಂದಲೇ ಜೀವನ ನಡೆಸುತ್ತಿವೆ. ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅನ್ನು ಮಾಡಿಕೊಳ್ಳಲಾಗಿದ್ದು, ಇದರಲ್ಲಿ 103 ಮಂದಿ ಸದಸ್ಯರಿದ್ದಾರೆ. ಜೊತೆಗೆ ಕೆಲಸ ಮಾಡಲು ಯುವತಿಯರು ಹಾಗೂ ಮಹಿಳೆಯರು ಬರುತ್ತಾರೆ. ಆದ್ರೆ ಇದೀಗ ಕೊರೊನಾ ಹಿನ್ನೆಲೆ ಅವರ ಬದುಕು ಮೂರಾಬಟ್ಟೆಯಾಗಿದೆ.
ಕೋವಿಡ್-19 ಹಿನ್ನೆಲೆ ಮದುವೆ, ಶುಭ ಸಮಾರಂಭಗಳು, ದೇವಸ್ಥಾನಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಬ್ಯೂಟಿಷಿಯನ್ಗಳಿಗೆ ಮಾರ್ಚ್ ನಿಂದ ಮೂರ್ನಾಲ್ಕು ತಿಂಗಳ ಕಾಲ ಅಧಿಕ ದುಡಿಮೆ ಇರುತ್ತಿತ್ತು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ.
ಪಾರ್ಲರ್ ಬಾಡಿಗೆಯ ಜೊತೆಗೆ ಮನೆಯ ಬಾಡಿಗೆಯನ್ನೂ ಸಹ ಕಟ್ಟಬೇಕು. ಸಂಕಷ್ಟದಲ್ಲಿರುವ ನಮ್ಮ ನೆರವಿಗೆ ಯಾರೂ ಬಂದಿಲ್ಲ, ಮುಂದೆ ಮಳೆಗಾಲ, ನಂತರ ಆಷಾಢ ಬರುತ್ತದೆ. ಆಗ ಕೆಲಸ ಇರುವುದಿಲ್ಲ, ಮಹಿಳೆಯರು ಈ ವೃತ್ತಿಯಿಂದಲೇ ಜೀವನ ಸಾಗಿಸಬೇಕು. ಖಾಲಿ ಕುಳಿತಿರುವುದರಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇವೆ. ಸರ್ಕಾರ ಬೇರೆ ಬೇರೆ ವರ್ಗದವರನ್ನು ಗುರುತಿಸಿ ಸಹಾಯ ಹಸ್ತ ನೀಡಿದೆ. ಅದ್ರೆ ನಮಗೆ ಯಾವುದೇ ಸಹಾಯ ಮಾಡಿಲ್ಲ. ಈ ವೃತ್ತಿಯಲ್ಲಿ ಎಷ್ಟೋ ಹೆಣ್ಣು ಮಕ್ಕಳು ಗಂಡನನ್ನು ಕಳೆದುಕೊಂಡವರು ಇದ್ದಾರೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು ಎಂದು ಬ್ಯೂಟಿಷಿಯನ್ಗಳು ಮನವಿ ಮಾಡಿದ್ದಾರೆ.
ಇನ್ನು ಕಳೆದ ಎರಡು ತಿಂಗಳಿನಿಂದ ಬ್ಯೂಟಿ ಪಾರ್ಲರ್ಗಳನ್ನು ತೆಗೆದಿಲ್ಲ. ಮಾತ್ರವಲ್ಲದೇ ಕೆಲವೊಂದು ಸೌಂದರ್ಯವರ್ಧಕಗಳ ಅವಧಿ ಮುಗಿದಿರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದಿಟ್ಟಿರುವ ಪರಿಕರಗಳು ಹಾಳಾಗುತ್ತಿವೆ. ಬಾಡಿಗೆಯನ್ನೂ ಪಾವತಿಸಬೇಕು. ಬ್ಯೂಟಿಷಿಯನ್ಗಳ ಕಷ್ಟಕ್ಕೆ ಯಾರೂ ಸ್ಪಂದಿಸಿಲ್ಲ, ಆಹಾರ ಪದಾರ್ಥಗಳ ಕಿಟ್ ಸಹ ನೀಡಿಲ್ಲ. ಈಗಾಗಲೇ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೂ ಸಹ ಕೊರೊನಾ ಸೋಂಕು ಹರಡುವ ಭೀತಿಯಿಂದ ಯಾರೂ ಮನೆಯಿಂದ ಹೊರಬರುತ್ತಿಲ್ಲ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜೊತೆಗೆ ಪಾರ್ಲರ್ ಗಳಿಗೆ ಬರುವವರ ಆರೋಗ್ಯದ ಬಗ್ಗೆ ಎಚ್ಚರ ವಹಿಸುತ್ತೇವೆ. ಹಾಗಾಗಿ ಪಾರ್ಲರ್ ತೆರೆಯಲು ಅನುಮತಿ ನೀಡಬೇಕು, ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಆರ್ಥಿಕ ಸಹಾಯ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.