ಬೆಂಗಳೂರು : ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ನಡೆದ ದುರಂತ 'ಪೂರ್ವ ನಿಯೋಜಿತವಾದ ಕೃತ್ಯ' ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಕಿಡಿಗೇಡಿಗಳು ಈ ಕೃತ್ಯವನ್ನು ಸಂಜೆ ಸುಮಾರು 7-8 ಗಂಟೆಯ ವೇಳೆಗೆ ನಡೆಸಿದ್ದು, ಇದು ಪೊಲೀಸರು ರಿಲಿವರ್ ತೆಗೆದುಕೊಳ್ಳುವ ಸಮಯವಾಗಿತ್ತು. ಈ ಸಂದರ್ಭದಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರುತ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಆರೋಪಿಗಳು ರೌದ್ರಾವತಾರ ಪ್ರದರ್ಶಿಸಿದ್ದಾರೆ.
ಕಿಡಿಗೇಡಿಗಳ ಮೊದಲ ಟಾರ್ಗೆಟ್ ನವೀನ್ ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಆಗಿತ್ತು. ಘಟನೆಗೂ ಮೊದಲು ನವೀನ್ ಮೇಲೆ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಯಲ್ಲಿ ದೂರು ನೀಡಲಾಗಿದೆ. ಆರೋಪಿಯ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ಕಿಡಿಗೇಡಿಗಳ ಪಿತ್ತ ನೆತ್ತಿಗೇರಲು ಕಾರಣವಾಗಿತ್ತು.
ಪೂರ್ವ ವಿಭಾಗ ಠಾಣಾ ವ್ಯಾಪ್ತಿಯ ಬಳಿ ಬಹುತೇಕ ಮುಸ್ಲಿಂ ಸಮುದಾಯದವರೇ ವಾಸವಾಗಿದ್ದಾರೆ. ಆದರೆ ಕಿಡಿಗೇಡಿಗಳು ಮೊದಲೇ ಫ್ಲಾನ್ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿ, ಗಲಾಟೆ ಮಾಡುವವರನ್ನು ಆಯ್ಕೆ ಮಾಡಿಕೊಂಡಿಕೊಂಡು, ಹಣ ಕೊಟ್ಟು ರೆಡಿ ಮಾಡಿಕೊಂಡಿದ್ದಾರೆ. ನಂತರ ಪೆಟ್ರೋಲ್ ಬಾಂಬ್, ಗ್ಯಾಸ್, ಡೀಸೆಲ್ ತಂದು ಸುರಿದು ಮನಸೋ ಇಚ್ಛೆ ಬೆಂಕಿ ಹಚ್ಚಿದ್ದಾರೆ. ಈ ಘಟನೆ ನಡೆದಿರುವ ಸ್ಥಳ ಕಿರಿದಾದ ರಸ್ತೆಗಳಿಂದ ಕೂಡಿದ್ದು, ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಲು ದುಷ್ಕರ್ಮಿಗಳಿಗೆ ಇನ್ನಷ್ಟು ಅನುಕೂಲ ಕಲ್ಪಿಸಿತ್ತು.
ಇಲ್ಲಿಯವರೆಗೆ ಪೊಲೀಸರ ತನಿಖೆ ವೇಳೆ 6 ಮನೆ, 10 ಅಂಗಡಿ, 80ಕ್ಕೂ ಹೆಚ್ಚು ವಾಹನಗಳು, 70 ಪೊಲೀಸರಿಗೆ ಗಾಯ, ಶಾಸಕರ ಕಚೇರಿ, 30 ಸಾರ್ವಜನಿಕರಿಗೆ ಗಾಯವಾಗಿರುವುದು ಗೊತ್ತಾಗಿದೆ.
ಗಲಭೆಗೆ ಎಸ್ಡಿಪಿಐ ಸಂಘಟನೆ ನಂಟು
ಈ ಹಿಂದೆ ಶಿವಾಜಿನಗರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಮಂಗಳೂರು ಗಲಭೆ ನಡೆದಾಗ ಎಸ್ಡಿಪಿಐ ಪಾತ್ರ ಪ್ರಮುಖವಾಗಿ ಕೇಳಿ ಬಂದಿತ್ತು. ಸದ್ಯ ಈ ಘಟನೆಯ ಮಾಸ್ಟರ್ ಮೈಂಡ್ ಕೂಡ ಮುಜಾಮಿಲ್ ಪಾಷನೆಂದೇ ಪೊಲೀಸರು ಹೇಳ್ತಿದ್ದಾರೆ. ಈತ ಎಸ್ಡಿಪಿಐನಿಂದ ಚುನಾವಣೆಗೆ ಸ್ಪರ್ಧಿಸಿ ಶಾಸಕನ ಬೆಂಬಲಿಗ ಅಭ್ಯರ್ಥಿ ಎದುರು ಪರಾಜಿತನಾಗಿದ್ದ. ಇದೀಗ ನವೀನ್ ಮೇಲೆ ಡಿ.ಜೆ.ಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದ. ಸದ್ಯ ಈ ಘಟನೆಯಲ್ಲಿ ಎಸ್ಡಿಪಿಐ ಸಂಘಟನೆಯ ಕೈವಾಡ ಇರುವುದಕ್ಕೆ ಪೊಲೀಸರಿಗೆ ಕೆಲ ಸಾಕ್ಷ್ಯ ಗಳು ಲಭ್ಯವಾಗಿದೆ.
ಗಲಭೆ ನಡೆಯುವ ಸಣ್ಣ ಸುಳಿವು ಕೂಡಾ ಪೊಲೀಸರಿಗೆ ಸಿಕ್ಕಿಲ್ಲ
ಪೂರ್ವಯೋಜಿತ ಕೃತ್ಯದಿಂದಾಗಿ ಕಿಡಿಗೇಡಿಗಳು ಶಿವಾಜಿನಗರ, ಆರ್.ಟಿ.ನಗರ, ಪುಲಕೇಶಿ ನಗರ ಕಡೆಯಿಂದ ಬಂದಿದ್ದಾರೆ. ದಾಳಿ ಮಾಡುವವರೆಗೂ ಪೊಲೀಸರಿಗೆ ಮಾಹಿತಿನೇ ಇರಲಿಲ್ಲ. ದಾಳಿ ನಡೆದಾಗ ಠಾಣೆಯಲ್ಲಿ ಸಿಬ್ಬಂದಿಯ ಸಂಖ್ಯೆ ಕೂಡ ತೀರಾ ಕಡಿಮೆ ಇದ್ದಿದ್ದರಿಂದ ಪೊಲೀಸರು ಕೈಕಟ್ಟಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆ ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಾಗೆಯೇ ಸ್ಥಳಕ್ಕೆ ಇತರೆ ಪೊಲೀಸರು ಬರಲಾಗದ ರೀತಿ ಬೆಂಕಿ ಕೆನ್ನಾಲಿಗೆ ಕಂಡು ಬರುತ್ತಿತ್ತು ಎಂದಿದ್ದಾರೆ ತನಿಖಾಧಿಕಾರಿಗಳು.