ದಾವಣಗೆರೆ: ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯನ್ನು ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ. ಆದ್ರೂ ಛಲ ಬಿಡದ ರೈತ ಶಿವಮೂರ್ತಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ 2,500 ಬಾಳೆಗಿಡಗಳನ್ನು ನೆಟ್ಟು ಉತ್ತಮ ಬಾಳೆ ತೋಟ ಮಾಡಿದ್ದರು. ಅದ್ರೆ ಮುಂಗಾರು ಪೂರ್ವವಾಗಿ ಸುರಿದ ಗಾಳಿಸಹಿತ ಮಳೆಯಿಂದ ಬಾಳೆ ಗಿಡಗಳು ನೆಲಕಚ್ಚಿವೆ. 2,500 ಬಾಳೆಗಿಡಗಳಲ್ಲಿ 1,500ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಕ್ಕುರುಳಿದ್ದು ರೈತ ಕಂಗಾಲಾಗಿದ್ದಾನೆ.
ಇನ್ನೊಂದು ತಿಂಗಳು ಕಳೆದಿದ್ರೆ ಬಾಳೆ ಫಸಲು ಕೈಗೆ ಬರುತ್ತಿತ್ತು. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಶಿವಮೂರ್ತಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಪತ್ನಿಯ ತಾಳಿಸಹಿತ ಚಿನ್ನ ಅಡವಿಟ್ಟು ಸಾಲ ಮಾಡಿ ಬಾಳೆ ಬೆಳೆದಿದ್ದರೂ ಫಸಲು ಮಾತ್ರ ಕೈ ಸೇರಲಿಲ್ಲ. ನಾಲ್ಕು ಲಕ್ಷದಷ್ಟು ನಷ್ಟ ಅನುಭವಿಸಿದ್ದು, ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲವೆಂದು ತಮ್ಮ ಅಳಲು ತೋಡಿಕೊಂಡರು.