ದಾವಣಗೆರೆ:ಜಗಳೂರಿನ 57 ಕೆರೆ ತುಂಬಿಸುವ ಯೋಜನೆ ಈಗಾಗಲೇ ಯಶಸ್ವಿಯಾಗಿದೆ. ಸಾಕಷ್ಟು ಕೆರೆಗಳಿಗೆ ನೀರು ಕೂಡ ಬಂದಿದೆ. ಆ 57 ಕೆರೆಗಳಿಗೆ ನೀರು ತುಂಬಿಸುವ ಕೆರೆಗಳ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಾಯಿಟೋಣಿ ಗ್ರಾಮದ ಕೆರೆ ಕೂಡ ಒಂದು ಎಂದು ನೀರಾವರಿ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ತಾಯಿ ಟೋಣಿ ಗ್ರಾಮದಲ್ಲಿ ಕೆರೆಯೇ ಇಲ್ಲ ಎಂದು ಗ್ರಾಮಸ್ಥರು, ರೈತರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಇದೀಗ ಇದೊಂದು ದೊಡ್ಡ ವಿವಾದವಾಗಿ ಪರಿಣಮಿಸಿದೆ.
ಜಗಳೂರು ತಾಲೂಕಿನ ತಾಯಿ ಟೋಣಿಯಲ್ಲಿರುವ 10 ಎಕರೆ ಜಮೀನು ಕೆರೆ ಹೋಲುವಂತಿದೆ. ಅದೇ ತಾಯಿಟೋಣಿ ಗ್ರಾಮದ ಕೆಲವರು ಇದು ಕೆರೆ. 57 ಕೆರೆ ತುಂಬಿಸುವ ಯೋಜನೆಯ ಪಟ್ಟಿಯಲ್ಲಿ ತಾಯಿಟೋಣಿ ಗ್ರಾಮದಲ್ಲಿ ಕೆರೆ ಇದೆ. ಅದರಲ್ಲಿ ಕೆಲವರು ಉಳುಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಅಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಕೇಳಿದರೆ ಇದು ನಮ್ಮ ಪೂರ್ವಜರು, ತಾತ ಮುತ್ತಾತನ ಕಾಲದಲ್ಲಿ ಉಳುಮೆ ಮಾಡುತ್ತಿದ್ದ ಜಮೀನು. ಅಂದಿನ ಬ್ರಿಟಿಷ್ ಹಾಗೂ ಮೈಸೂರು ಸಂಸ್ಥಾನದ ಅಧಿಕಾರದ ಅವಧಿಯಲ್ಲಿ ಇದು ಕ್ರಯ ಜಮೀನು ಎಂದು ಘೋಷಿಸಿ ತಾಯಿ ಟೋಣಿ ಗ್ರಾಮಸ್ಥರಿಗೆ ನೀಡಿತ್ತು. ಜಮೀನಿನ ನಾಲ್ಕು ಭಾಗದಲ್ಲಿ ನೀರು ನಿಲ್ಲಲು ಏರಿಗಳನ್ನು ಕಟ್ಟಲಾಗುತ್ತಿತ್ತಂತೆ. ಅದು ಇಂದಿಗೂ ಕೂಡ ಇದ್ದು ಕೆರೆ ಏರಿಯಾವನ್ನು ಹೋಲುವಂತಿದೆ ಎಂಬುವುದು ರೈತರ ವಾದ.