ದಾವಣಗೆರೆ:ಅದು ಸರಿ ಸುಮಾರು ಸಾವಿರ ಅಡಿ ಎತ್ತರದ ಬೆಟ್ಟ. ಆ ಬೆಟ್ಟದಿಂದ ಸುಮಾರು 1 ಕಿಲೋ ಮೀಟರ್ ದೂರ ಕೆಳಗೆ ರಥವನ್ನ ಎಳೆದು ತರಲಾಗುತ್ತದೆ. ಭಾರತ ದೇಶದಲ್ಲಿಯೇ ಈ ರೀತಿ ಬೆಟ್ಟದ ಮೇಲಿಂದ ಕೆಳ ಮುಖವಾಗಿ ನಡೆಯುವ ರಥೋತ್ಸವ ನಡೆಯುವುದು ಅಪರೂಪ. ಇಂತಹ ಅಪರೂಪದ ರಥೋತ್ಸವ ನಡೆಯುವುದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ದೇವರಹಳ್ಳಿ ಗ್ರಾಮದಲ್ಲಿ.
ಗ್ರಾಮದ ಬೆಟ್ಟದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ದೇಗುಲವಿದೆ. ಪ್ರತಿ ವರ್ಷ ಯುಗಾದಿ ಬಳಿಕ ರಥೋತ್ಸವ ಜರುಗುತ್ತದೆ. ಕಳೆದ 2 ವರ್ಷ ಕೋವಿಡ್ ಹಿನ್ನೆಲೆ ರಥೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಅತ್ಯಂತ ಅದ್ಧೂರಿಯಾಗಿ ರಥೋತ್ಸವ ನೆರವೇರಿದ್ದು, ಸಾವಿರಾರು ಭಕ್ತರು ಭಾಗಿಯಾಗಿದ್ದರು. ಮುಂಜಾನೆಯಿಂದಲೇ ರಥಕ್ಕೆ ವಿಶೇಷ ಅಲಂಕಾರ ಮಾಡಿ ನಂತರ, ಭಕ್ತರು ರಥವನ್ನ ಎಳೆದರು. ಸುಮಾರು ಸಾವಿರ ಅಡಿಗೂ ಎತ್ತರವಿರುವ ಬೆಟ್ಟದ ಮೇಲಿಂದ ರಥವನ್ನ ಗ್ರಾಮದ ಪ್ರಮುಖ ಬೀದಿಗೆ ಎಳೆಯುತ್ತಾರೆ. ಈ ರೀತಿಯಾಗಿ ಎಲ್ಲಿಯೂ ಬೆಟ್ಟದ ಮೇಲಿಂದ ರಥ ಎಳೆಯುವುದಿಲ್ಲ. ಇದೊಂದು ಅಪರೂಪದ ರಥೋತ್ಸವ ಎನ್ನುತ್ತಾರೆ ಭಕ್ತರು.