ಹಾಸನ :ನಮ್ಮಲ್ಲಿ ಐಕ್ಯತೆ ಇಲ್ಲದಿರುವುದರಿಂದಲೇ ನೀರಾವರಿ ವಿಚಾರದಲ್ಲಿ ರಾಜ್ಯ ಇಂದು ಕೆಟ್ಟ ಸನ್ನಿವೇಶ ಎದುರಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ನಿನ್ನೆ ಜನತಾ ಜಲಧಾರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಇಕ್ಕಟ್ಟಿಗೆ ಸಿಲುಕಲು ನಮ್ಮಲ್ಲಿ ಐಕ್ಯತೆ ಇಲ್ಲದಿರುವುದೇ ಕಾರಣ ಎಂದು ವಿಷಾದಿಸಿದರು.
ಕಾಂಗ್ರೆಸ್‌ನವರು ಮೇಕೆದಾಟಿನಿಂದ ನೀರು ತರುತ್ತೇವೆ ಎಂದು ಪಾದಯಾತ್ರೆ ಮಾಡಿದರು. ಅವರು ನೀರು ತಂದರೆ ಸಂತೋಷ. ಅಂತೆಯೇ ರಾಜ್ಯ ಸರ್ಕಾರದವರು ಕೇಂದ್ರದಿಂದ ಶೀಘ್ರ ಮಂಜೂರಾತಿ ಪಡೆಯುತ್ತೇವೆ ಅಂತಿದ್ದಾರೆ. ಆದರೆ, ಇದು ನಿಜವಲ್ಲ. ಜನರ ಮುಂದೆ ಸತ್ಯ ಹೇಳುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಹೇಳಿದರು.
ನಾನು 1962ರಲ್ಲಿ ಬಂಡಾಯ ಕಾಂಗ್ರೆಸ್ನಿಂದ ಗೆದ್ದು ಕರ್ನಾಟಕ ವಿಧಾನಸಭೆಗೆ ಹೋದೆ. ರಾಜ್ಯಕ್ಕೆ ಏನೇ ಅನ್ಯಾಯ ಆದ್ರೂ ವಾಸ್ತವಾಂಶ ಅರಿಯಲು ತಜ್ಞರ ಜೊತೆ ಮಾತಾಡಿ ನಂತರ ವಿಧಾನಸಭೆಯಲ್ಲಿ ಮಂಡನೆ ಮಾಡಿದೆ. ಅಲ್ಲಿಂದ ಆರಂಭವಾದ ನನ್ನ ಹೋರಾಟ ಇಂದು ಕೊನೆಯ ಘಟ್ಟಕ್ಕೆ ಬಂದಿದೆ. ಮತ್ತೆ ಹೋರಾಟ ಮಾಡುವ ಶಕ್ತಿ ನನ್ನಲ್ಲಿಲ್ಲ ಎಂದರು.
ಕುಮಾರಸ್ವಾಮಿಗೆ ಆ ರೀತಿ ಯೋಚನೆ ಮಾಡು ಅಂದೆ. ಲಘುವಾಗಿ ಮಾತನಾಡುವ ಕೆಲ ರಾಜಕಾರಣಿಗಳಿದ್ದಾರೆ. ಆದರೆ, ಜಲಧಾರೆ ಕಾರ್ಯಕ್ರಮ ಮಗ ಅಥವಾ ಮೊಮ್ಮಗ ಸಿಎಂ ಆಗಲು ಅಲ್ಲ, ಅಧಿಕಾರ ಕೊಡುವವರು ಜನ, ನಾವು ಸರಿಯಾಗಿ ನಡೆದುಕೊಂಡರೆ ಜನ ಸಹಾಯ ಮಾಡುತ್ತಾರೆ ಎಂದು ಟೀಕಾಕಾರರಿಗೆ ನಯವಾಗಿಯೇ ತಿರುಗೇಟು ನೀಡಿದರು.
ನನಗೆ ಅಧಿಕಾರದ ಹುಚ್ಚಿಲ್ಲ. ರಾಜ್ಯ ಉಳಿಸೋದು ಹೇಗೆ ಅನ್ನೋದೇ ಚಿಂತೆ ಎಂದ ಗೌಡರು, ನೀರಾವರಿ ವಿಚಾರದಲ್ಲಿ ನಮ್ಮಲ್ಲಿ ಒಗ್ಗಟ್ಟಿಲ್ಲ. ಅದಕ್ಕೇ ನಮ್ಮ ಕೂಗಿಗೆ ಸ್ಪಂದನೆ ಸಿಗುತ್ತಿಲ್ಲ. ತಮಿಳುನಾಡಿನ 40 ಸಂಸದರು ಒಟ್ಟಾಗುತ್ತಾರೆ. ಎಲ್ಲಿಯವರೆಗೆ ನಮ್ಮಲ್ಲಿ ಐಕ್ಯತೆ ಮೂಡುವುದಿಲ್ಲವೋ, ಒಬ್ಬೊಬ್ಬರು ಒಂದೊಂದು ಛಿದ್ರವಾಗುತ್ತಾರೋ ಅಲ್ಲಿವರೆಗೂ ರಾಜ್ಯಕ್ಕೆ ಒಳಿತಾಗುವುದಿಲ್ಲ ಎಂದು ಎಚ್ಚರಿಸಿದರು.
ಚುನಾವಣೆಯೇ ಬೇರೆ, ನೀರಿಗಾಗಿ ಹೋರಾಟವೇ ಬೇರೆ, ಈ ಹೋರಾಟದಲ್ಲಿ ನಾವೆಲ್ಲ ಒಂದಾಗಬೇಕು. ಇಲ್ಲವಾದರೆ ತಮಿಳರ ಹೊಡೆತ ತಡೆಯಲು ಆಗಲ್ಲ. ಸುಪ್ರೀಂಕೋರ್ಟ್, ನ್ಯಾಯಾಧಿಕರಣದ ತೀರ್ಮಾನಕ್ಕೆ ವಿರುದ್ಧವಾಗಿ ಕುಡಿಯುವ ನೀರಿನ ನೆಪದಲ್ಲಿ ತಮಿಳುನಾಡಿನಲ್ಲಿ ಅನೇಕ ನೀರಾವರಿ ಯೋಜನೆ ನಡೆಯುತ್ತಿವೆ. ಆದರೆ, ನಮ್ಮಲ್ಲಿ ಏನಾಗಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗಲೂ ನಾನು ಲೋಕಸಭೆಯಲ್ಲೇ ಎಳೆ ಎಳೆಯಾಗಿ ಸಮಸ್ಯೆ ಬಿಚ್ಚಿಟ್ಟೆ, ಆಗಲೂ ಯಾರೂ ಬೆಂಬಲಕ್ಕೆ ಬರಲಿಲ್ಲ ಎಂದು ನೊಂದು ನುಡಿದರು. ಇನ್ನಾದರೂ ಕಾಂಗ್ರೆಸ್-ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ನಾನು ಎಲ್ಲಿವರೆಗೆ ಇರುತ್ತೇನೋ ಗೊತ್ತಿಲ್ಲ. ಯಾರ ಮನದಲ್ಲಿ ಏನಿದೆಯೋ ಗೊತ್ತಿಲ್ಲ. ನೀರಿನ ವಿಷಯದಲ್ಲಾದರೂ ಹೋರಾಟ ಮಾಡಲು ಐಕ್ಯತೆ ಒಗ್ಗಟ್ಟು ಪ್ರದರ್ಶಿಸಿ ಎಂದು ಮನವಿ ಮಾಡಿದರು.
ಜಲಧಾರೆ ಹೋರಾಟ ಕುಮಾರಸ್ವಾಮಿ ಅವರ ಕನಸಿನಕೂಸು, ಇದಕ್ಕೆ ಜನ ಬೆಂಬಲ ಬೇಕು. ಇಬ್ರಾಹಿಂ 1994ರಲ್ಲೂ ಜೆಡಿಎಸ್ ಅಧ್ಯಕ್ಷರಾಗಿದ್ದರು. ಇವರ ಶಾಸಕರು ಸಹಬಾಳ್ವೆಯಿಂದ ಒಂದಾಗಿ ಕೆಲಸ ಮಾಡಿ ಎಂದು ತಿಳಿ ಹೇಳಿದರು. ಇದೇ ವೇಳೆ ಹಾಸನ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಲು ನನಗೆ ಅಭ್ಯಂತರ ಇಲ್ಲ ಎಂದ ಗೌಡರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ರಾಮು ಅವರನ್ನು ಬೆಂಬಲಿಸಿ ಎಂದು ವಿನಂತಿಸಿದರು.
ಇದನ್ನೂ ಓದಿ:ಬಿಜೆಪಿ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಸಾಫ್ಟ್ ಕಾರ್ನರ್?: ಸಿಎಂ ಬೊಮ್ಮಾಯಿ ಹೇಳಿದ್ದೇನು?