ಬೆಂಗಳೂರು:ಯುವಕರು ಮತದಾನಕ್ಕೆ ಒಲವು ತೋರುತ್ತಿಲ್ಲ ಎಂಬುದು ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗೋಚರಿಸಿದೆ. ಚುನಾವಣಾ ಆಯೋಗ ಜಾಗೃತಿ, ಚುನಾವಣಾ ವ್ಯವಸ್ಥೆಗೆ ಯುವ ಸಮುದಾಯ ಬೆಲೆ ಕೊಡದಿರುವುದು ಕಂಡು ಬಂದಿದೆ. ಪ್ರತಿ ಚುನಾವಣೆಯಲ್ಲೂ ಇದೇ ಪರಿಸ್ಥಿತಿ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಟ್ಟು ಇರುವ 4.7 ಲಕ್ಷ ಮತದಾರರ ಪೈಕಿ ಶೇಕಡಾ 60ರಷ್ಟು ಯುವಕರಿದ್ದಾರೆ. ಆದರೆ, ಮತದಾನ ಬೆಳಗ್ಗೆ ಆರಂಭವಾದಾಗಿನಿಂದ ಈವರೆಗೂ ಯಾರೊಬ್ಬರೂ ಸುಳಿದಿಲ್ಲ ಎಂಬುದು ಈಟಿವಿ ಭಾರತದ ಕಣ್ಣಿಗೆ ಬಿದ್ದಿದೆ. ನಿಜಕ್ಕೂ ಇದೊಂದು ಬೇಸರದ ಸಂಗತಿ.
ಕೋವಿಡ್ ಆತಂಕ ಹಿನ್ನೆಲೆ ಒಂದಿಷ್ಟು ಮಂದಿ ಮತದಾನದಿಂದ ದೂರ ಉಳಿದಿದ್ದರೆ, ಮತ್ತೆ ಕೆಲವರು ಉದ್ಯೋಗದ ನೆಪವೊಡ್ಡಿದ್ದಾರೆ. ಆದರೆ, ಯಾವುದಕ್ಕೂ ಅಂಜದೇ, ಯಾವುದೇ ನೆಪ ಹೇಳದೇ ಹಿರಿಯ ನಾಗರಿಕರು ಹೆಚ್ಚು ಉತ್ಸುಕತೆಯಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರಾದ ಎಂ.ಸಿ.ವೇಲು, ಎಂ.ರುಕ್ಮಿಣಿ ದಂಪತಿ ಮತದಾನಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರುಕ್ಮಿಣಿ ಅವರಿಗೆ ಓಡಾಡಲು ಸಾಧ್ಯವಾಗದ ಕಾರಣ ವ್ಹೀಲ್ಚೇರ್ ವ್ಯವಸ್ಥೆ ಮಾಡಿ ಮತದಾನಕ್ಕೆ ಕಳುಹಿಸಿಕೊಲಾಯಿತು.