ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ರೀತಿ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಅಧಿಕಾರಿಗಳ ವೇತನ ಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬಂದಿರುವ ಮನವಿ ಪರಿಗಣಿಸಿ ಅಧಿಕಾರಿಗಳ ವೇತನ ಸಮಿತಿ ರಚಿಸುವ ಬಗ್ಗೆ 2022-23ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ರಾಜ್ಯದಲ್ಲಿ ಶ್ರೀಸಾಮಾನ್ಯರ, ರೈತರ, ಕೂಲಿ ಕಾರ್ಮಿಕರ ಅಭ್ಯುದಯಕ್ಕಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ತರುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಸರ್ಕಾರಿ ನೌಕರರು ಜೀವದ ಹಂಗು ತೊರೆದು ದಕ್ಷತೆಯಿಂದ ಕೆಲಸ ನಿರ್ವಹಿಸಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಹಾಗೂ ಸೋಂಕಿತರ ಚಿಕಿತ್ಸೆ, ನಿರ್ವಹಣೆಯಲ್ಲಿ ಅನನ್ಯ ಕೆಲಸ ನಿರ್ವಹಿಸಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಉತ್ತಮ ಹೆಸರು ಬಂದಿರುತ್ತದೆ.
ರಾಜ್ಯ ಸರ್ಕಾರವು ಪ್ರತೀ ಐದು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸುವ ಸಂಪ್ರದಾಯವನ್ನು ಹೊಂದಿರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಸಹ 5ನೇ ವೇತನ ಆಯೋಗವು ನೀಡಿದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿರುವುದನ್ನು ಇಲ್ಲಿ ಸ್ಮರಿಸುತ್ತಾ, ಇದಲ್ಲದೇ ಸರ್ಕಾರಿ ನೌಕರರ ಪರವಾದ ಆರೋಗ್ಯ ಇನ್ನಿತರೆ ಯೋಜನೆಗಳನ್ನು ಜಾರಿಗೊಳಿಸಿರುತ್ತೇನೆ ಎಂದು ಉಲ್ಲೇಖಿಸಿ ಪತ್ರ ಬರೆದು ಸರ್ಕಾರಿ ನೌಕರರ ಪರ ಬಿಎಸ್ವೈ ಧ್ವನಿ ಎತ್ತಿದ್ದಾರೆ.