ಕೆ.ಆರ್ ಪುರ(ಬೆಂಗಳೂರು ಗ್ರಾಂ): ಕೆಲಸಕ್ಕೆ ಹೊಗುತ್ತಿದ್ದ ಮನೆಯಲ್ಲಿ ಮೂರು ತಿಂಗಳಲ್ಲಿ ಸುಮಾರು 250 ಗ್ರಾಂ ಚಿನ್ನ ಕಳ್ಳತನ ಆಗಿದೆ ಎಂದು ಮನೆ ಮಾಲೀಕ ಟೆಕ್ಕಿ ರೋಹಿತ್ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನನೊಂದು ಆತ್ಮಹತ್ಯೆಗೆ ಶರಣಾದ ಕೆಲಸದಾಕೆ ಮನೆಯಲ್ಲಿ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೋಮವಾರದಿಂದ ಮನೆ ಕೆಲಸದಾಕೆ ಉಮಾ ಅವರನ್ನ ಕೆ.ಆರ್.ಪುರ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಕಳೆದ ಗುರುವಾರ ಪೊಲೀಸರು ಮನೆಗೆ ಬಂದು ಸಂಪೂರ್ಣವಾಗಿ ಮನೆ ಪರಿಶೀಲನೆ ಸಹ ನಡೆಸಿದ್ದರು. ಈ ವೇಳೇ ಯಾವುದೇ ರೀತಿಯ ಚಿನ್ನಾಭರಣ ಲಭ್ಯವಾಗಿರಲಿಲ್ಲ.
ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದರಿಂದ ತಮ್ಮ ಊರಿನಲ್ಲಿ ಮರ್ಯಾದೆ ಹೋಯಿತು ಎಂದು ಮನನೊಂದು ಇಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೂ ಮೊದಲು ವಿಡಿಯೋ ಮಾಡಿ ಪೊಲೀಸರಿಗೆ ರವಾನೆ ಮಾಡಿದ್ದಾಳೆ.
ವಿಡಿಯೋದಲ್ಲಿ ತನ್ನ ಸಾವಿಗೆ ರೋಹಿತ್ ಹಾಗೂ ಆತನ ಪತ್ನಿ ಕಾರಣವೆಂದು ಆರೋಪ ಮಾಡಿದ್ದಾಳೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿರಿ:ಮೋದಿಯನ್ನ ಅಧಿಕಾರದಿಂದ ಕೆಳಗಿಳಿಸಿ, ಓಡಿಸಲಾಗುವುದು: ಪ್ರಧಾನಿ ವಿರುದ್ಧ ಕೆಸಿಆರ್ ವಾಗ್ದಾಳಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮೃತ ಮಹಿಳೆಯ ಮಗ ಚಂದನ್, ನಮ್ಮತಾಯಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಚಿನ್ನ ಕಳ್ಳತನ ಆಗಿರುವುದಕ್ಕೆ ನಮ್ಮ ತಾಯಿ ಮೇಲೆ ಅನುಮಾನ ಪಟ್ಟಿರುವುದು ಏಕೆ?. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಿನಿಂದಲೂ ನಮ್ಮ ತಾಯಿ ರಜೆ ಹಾಕಿಲ್ಲ. ಪೊಲೀಸರ ವಿಚಾರಣೆ ಹಾಗೂ ಮನೆ ಮಾಲೀಕರ ಕಿರುಕುಳದಿಂದ ನನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ ಮಾಡಿದ್ದಾನೆ.