ಬೆಂಗಳೂರು:ಸಮಾಜವನ್ನು ಕಾಯುವ ಪೊಲೀಸರೇ ಫೋನ್ ಟ್ಯಾಪ್ ಮಾಡಿದ್ದಾರೆ ಅಂದ್ರೆ ಏನು ಅರ್ಥ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಭಾಸ್ಕರ್ ರಾವ್ ಫೋನ್ ಟ್ಯಾಪಿಂಗ್ ಸಾಬೀತಾಗಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಆರು ತಿಂಗಳ ಹಿಂದೆ ನಾನು ಹೇಳಿದಾಗ ಅಶೋಕ್ ಜೋಕ್ ಮಾಡ್ತಿದ್ದಾರೆ ಅಂದುಕೊಂಡಿದ್ರು. ಆದ್ರೆ, ಆ ವಿಚಾರವೇ ಈಗ ದೊಡ್ಡದಾಗಿದೆ. ಭಾಸ್ಕರ್ ರಾವ್ ತಮ್ಮ ಫೋನ್ ಟ್ಯಾಪಿಂಗ್ ಆಗಿಲ್ಲ ಅಂತ ಹೇಳಿಬಿಟ್ಟರೆ, ತನಿಖೆ ನಡೆಸುವುದೇ ಬೇಡ. ಅವರು ಟ್ಯಾಪಿಂಗ್ ಆಗಿದೆ ಅಂದರೆ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದರು.
ಆರು ತಿಂಗಳ ಹಿಂದೆಯೇ ಫೋನ್ ಟ್ಯಾಪಿಂಗ್ ಆಗಿದೆ ಎಂಬ ಆರೋಪ ಮಾಡಿದ್ದೇನೆ. ಗೃಹ ಮಂತ್ರಿಯಾಗಿದ್ದಾಗ ಇಲಾಖೆಯನ್ನು ನಾನು ಚೆನ್ನಾಗಿ ನೋಡಿದ್ದೇನೆ. ಹಿಂದೆ ಮಾಜಿ ಗೃಹಸಚಿವನಾಗಿ ಆರೋಪ ಮಾಡಿದ್ದೆ. ಈಗಲೂ ಮಾಜಿ ಗೃಹ ಸಚಿವನಾಗಿ ಹೇಳುತ್ತಿದ್ದೇನೆ. ಫೋನ್ ಟ್ಯಾಪಿಂಗ್ ಆಗಿರುವುದು ನೂರಕ್ಕೆ ನೂರು ಸತ್ಯ ಎಂದು ಸ್ಪಷ್ಟಪಡಿಸಿದರು.
ವೈಜ್ಞಾನಿಕ ತನಿಖೆ ಆಗಬೇಕು...
ಶಾಸಕರನ್ನು ಹೆದರಿಸಲು ಫೋನ್ ಟ್ಯಾಪಿಂಗ್ ಮಾಡಿದ್ರೆ ಅದು ಕಾನೂನು ಬಾಹಿರ. ಈ ಬಗ್ಗೆ ಯಾರೇ ಫೋನ್ ಕದ್ದಾಲಿಕೆ ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಫೋನ್ ಕದ್ದಾಲಿಕೆಯನ್ನ ಬಿಜೆಪಿ ಸಹಿಸಲ್ಲ. ಯಾವಾಗ, ಯಾರದ್ದು ಫೋನ್ ಟ್ಯಾಪಿಂಗ್ ಮಾಡಿದ್ದಾರೆ ಎಂಬ ಬಗ್ಗೆ ವೈಜ್ಞಾನಿಕವಾದ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.