ಬೆಂಗಳೂರು: ಲೋಕಸಭಾ ಅಧಿವೇಶನದ ಹಿನ್ನೆಲೆ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ಹಲವು ಶಾಸಕರು ನಿರ್ಧಾರ ಮಾಡಿದ್ದೇವೆ. ಹೋಗುವಾಗ ಕದ್ದು ಮುಚ್ಚಿ ತೆರಳುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.
ದೆಹಲಿ ಭೇಟಿ ಕುರಿತು ರೇಣುಕಾಚಾರ್ಯ ಹೇಳಿಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಲೋಕಸಭಾ ಅಧಿವೇಶದ ಹಿನ್ನೆಲೆಯಲ್ಲಿ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ತೀರ್ಮಾನ ಮಾಡಿದ್ದೇವೆ. ಐದಾರು ಜನ ಶಾಸಕರ ಜೊತೆ ಈ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದರು.
ಸಿಎಂ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ:
ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಒಬ್ಬಿಬ್ಬರಿಂದ ಸಿಎಂ ಬದಲಾವಣೆ ಅಸಾಧ್ಯ. ರಾಷ್ಟ್ರೀಯ ನಾಯಕರ ಸೂಚನೆ ಮೇಲೆ, ಶಾಸಕರ ಬೆಂಬಲದೊಂದಿಗೆ ಬಿಎಸ್ವೈ ಸಿಎಂ ಆಗಿದ್ದಾರೆ. ಅವರು ಆ ಸ್ಥಾನದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಅಂತ ಹೇಳೋಕೆ ನಾನ್ಯಾರು?. ಜನಾದೇಶ ಅವರ ಪರವಿದೆ. ಬೆಂಗಳೂರಲ್ಲಿ ಕುಳಿತು ರಾಜಕಾರಣ ಮಾಡಿದ್ರೆ ಆಗಲ್ಲ. ದೆಹಲಿಗೆ ಹೋಗಿ ರಾಜಕಾರಣ ಮಾಡೋಕೂ ಆಗಲ್ಲ ಎಂದು ಯತ್ನಾಳ್ ದೆಹಲಿ ಭೇಟಿಗೆ ರೇಣುಕಾಚಾರ್ಯ ತಿರುಗೇಟು ನೀಡಿದರು.
ಕೆಲವರು ಹಗಲು ಕನಸು ಕಾಣುತ್ತಿದ್ದಾರೆ:
ನಾಯಕತ್ವ ಬದಲಾವಣೆ ಕುರಿತು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಸಿಎಂ ಬದಲಾವಣೆ ಎಂದವರು ರಾಜ್ಯದ ಜನರು ಎದುರು ವಿಲನ್ ಆಗುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಕೂಡಾ ಈ ಮಾತನ್ನು ಹೇಳಿದ್ದಾರೆ. ರಾಜ್ಯದಲ್ಲಿ ಬಿಎಸ್ವೈ ನಾಯಕತ್ವದ ಸರ್ಕಾರ ಮುಂದುವರೆಯುತ್ತದೆ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಾಜಕೀಯ ಮಾಡಲ್ಲ. ಚುನಾವಣೆ ಬಂದಾಗ ಮಾತ್ರ ನಾನು ರಾಜಕೀಯ ಮಾಡುತ್ತೇನೆ. ಇವಾಗ ಏನಿದ್ದರೂ ಕೋವಿಡ್ ಕೆಲಸ ಎಂದು ರೇಣುಕಾಚಾರ್ಯ ಹೇಳಿದ್ರು.