ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿವಾದ ಬಗೆಹರಿಸುವ ಸಂಬಂಧ ಪ್ರತಿನಿಧಿಗಳು, ಅಧಿಕಾರಿಗಳು, ಸುಪ್ರೀಂಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದಸ್ಯರನ್ನು ಒಳಗೊಂಡು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿವರಾಮ ಕಾರಂತ ಬಡಾವಣೆ ಕುರಿತು ಪರಿಷತ್ ಕಲಾಪದಲ್ಲಿ ನಿಯಮ 330ರ ಅಡಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ, ಶಿವರಾಮ ಕಾರಂತ ಬಡಾವಣೆ ವಿಷಯಕ್ಕೆ ಬಹಳ ದೊಡ್ಡ ಇತಿಹಾಸ, ಕಾನೂನಿನ ನಿರ್ಬಂಧಗಳು ಇವೆ. ನಗರೀಕರಣ ಆಗುತ್ತಿದ್ದಂತೆ ಗ್ರಾಮಗಳ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಆದರೆ ಅದಕ್ಕಾಗಿ ಒಂದು ನೀತಿಯಿಲ್ಲ, ಯಾವ ನೀತಿ ಅನುಸರಿಸಬೇಕು ಎನ್ನುವ ಸ್ಪಷ್ಟತೆ ಇಲ್ಲ. ಈ ಬಗ್ಗೆ ನಾವೆಲ್ಲಾ ಚಿಂತನೆ ಮಾಡಬೇಕು ಎಂದರು.
ಬೆಂಗಳೂರು ಉತ್ತರದ ಸೋಮಶೆಟ್ಡಿಹಳ್ಳಿ ಇತರೆಡೆ 3,546 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಾಲ್ಕು ಬಡಾವಣೆ ಮಾಡಲು ಎಸ್ಎಂ ಕೃಷ್ಣ ಸರ್ಕಾರ ತೀರ್ಮಾನಿಸಿತ್ತು. ಕೆಂಪೇಗೌಡ, ಶಿವರಾಮ ಕಾರಂತ ಬಡಾವಣೆ ಉಳಿಸಿಕೊಂಡು ಇನ್ನೆರಡು ಪ್ರಸ್ತಾಪ ಕೈಬಿಡಲಾಯಿತು. ಕೆಂಪೇಗೌಡ ಬಡಾವಣೆ ಮತ್ತು ಶಿವರಾಮ ಕಾರಂತ ಬಡಾವಣೆಯಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಕೋರ್ಟ್‌ಗಳು ಹಲವು ತೀರ್ಪು ಕೊಟ್ಟಿವೆ. ಹಾಗಾಗಿ ಸುಪ್ರೀಂ ಮೊರೆ ಹೋಗಲಾಗಿದೆ ಎಂದು ಸದನಕ್ಕೆ ವಿವರಿಸಿದರು.
2013ರ ಭೂ ಸ್ವಾಧೀನ ಕಾಯ್ದೆ ಇದಕ್ಕೆ ಅನ್ವಯಿಸಲ್ಲ ಎಂದು ಕೋರ್ಟ್ ತೀರ್ಪು:
2008 ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದನ್ನು 2015 ರಲ್ಲಿ ಹೈಕೋರ್ಟ್ ರದ್ದುಪಡಿಸಿತು. ದ್ವಿಸದಸ್ಯ ಪೀಠವೂ 2017 ರಲ್ಲಿ ಬಿಡಿಎ ಮೇಲ್ಮನವಿ ಅರ್ಜಿ ವಜಾಗೊಳಿಸಿತ್ತು. 2018 ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಆದೇಶ ನೀಡಿತು. 2013ರ ಭೂ ಸ್ವಾಧೀನ ಕಾಯ್ದೆ ಇದಕ್ಕೆ ಅನ್ವಯಿಸಲ್ಲ ಎಂದು ತೀರ್ಪು ನೀಡಿತು. ಅದರ ಅನ್ವಯ ಬಿಡಿಎಗೆ ಸರ್ಕಾರ ಒಂದು ಆದೇಶ ಮಾಡಿದೆ. ರೈತರಿಗೆ ಜಾಗಕ್ಕೆ ಬದಲಾಗಿ 60:40ರ ಅನುಪಾತದಂತೆ ನಿವೇಶನ ಕೊಡುವ ತೀರ್ಮಾನ ಅಥವಾ 2008 ರಂತೆ ಹಣ ಕೊಡಬಹುದು ಎನ್ನುವುದು ಈಗಿರುವ ನಿಲುವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.