ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮತ್ತಷ್ಟು ಬಿರುಸುಗೊಂಡಿದ್ದು, ಇಂದು ಇಲ್ಲವೇ ನಾಳೆ ಅಭ್ಯರ್ಥಿಗಳ ಆಯ್ಕೆ ಅಂತಿಮ ಆಗುವ ನಿರೀಕ್ಷೆ ಇದೆ.
ಪರಿಷತ್ ಟಿಕೆಟ್ ಗಾಗಿ ‘ಕೈ’ ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ, ಇಂದಲ್ಲಾ ನಾಳೆ ಅಭ್ಯರ್ಥಿ ಆಯ್ಕೆ ಅಂತಿಮ ಕಾಂಗ್ರೆಸ್ ರಾಜ್ಯ ನಾಯಕರು ನಿರಂತರವಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸುವ ಕಸರತ್ತು ನಡೆದಿದ್ದು, ಹಲವೆಡೆ ಸಭೆ, ಚರ್ಚೆಗಳು ನಡೆಯುತ್ತಿವೆ. ಸದ್ಯ ಅಭ್ಯರ್ಥಿ ಆಯ್ಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಇಂದು ಬೆಳಗಿಂದ ಸಂಜೆಯವರೆಗೂ ಹಲವು ಆಕಾಂಕ್ಷಿಗಳು ಭೇಟಿಕೊಟ್ಟು ಮನವಿ ಸಲ್ಲಿಸಿದ್ದು, ಒಟ್ಟಾರೆ ಇಬ್ಬರು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತು ಕೊನೆಯ ಹಂತದಲ್ಲಿದೆ. ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಪಟ್ಟಿ ಕಳಿಸಿಕೊಟ್ಟಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಕೂಡ ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿ ಪಟ್ಟಿ ಕಳಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಇಂದು ಸಿದ್ದರಾಮಯ್ಯ ನಿವಾಸದಲ್ಲಿ ಹಲವು ಮುಖಂಡರ ಜೊತೆ ಚರ್ಚೆ ನಡೆದಿದೆ.
ಹಿರಿಯ ನಾಯಕರು ಸಭೆ ಇಂದು ಸಿದ್ದರಾಮಯ್ಯ ನಿವಾಸದಲ್ಲಿ ನಡೆದಿದ್ದು ಅಂತಿಮ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ. ಎರಡು ಸೀಟಿಗೆ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಅಂತಿಮ ಹಂತದಲ್ಲಿ ಅಖಾಡದಲ್ಲಿ ಉಳಿದಿದ್ದು ಇವರಲ್ಲಿ ನಾಲ್ವರನ್ನು ಅಂತಿಮಗೊಳಿಸಿ ಹೈಕಮಾಂಡ್ಗೆ ಪಟ್ಟಿ ಕಳಿಸುವ ಸಾಧ್ಯತೆ ಇದೆ. ಒಬಿಸಿ ಕೋಟಾದಿಂದ ಎರಡು, ಮೈನಾರಿಟಿಯಿಂದ ಇಬ್ಬರ ಆಯ್ಕೆ?ಗೆ ಪಟ್ಟಿ ಸಿದ್ಧಪಡಿಸಿ ಕಳಿಸಲಾಗುತ್ತಿದೆ.
ಅಲ್ಪಸಂಖ್ಯಾತರ ಕೋಟಾದಿಂದ ನಸೀರ್ ಅಹ್ಮದ್, ನಿವೇದಿತ್ ಆಳ್ವಾ, ಒಬಿಸಿಯಿಂದ ಎಂ.ಆರ್. ಸೀತಾರಾಂ, ಎಂ.ಸಿ. ವೇಣುಗೋಪಾಲ್ ಆಯ್ಕೆ ಸಾಧ್ಯತೆ ಇದೆ. ನಾಲ್ವರಲ್ಲಿ ಇಬ್ಬರನ್ನ ಅಂತಿಮಗೊಳಿಸಲಿರುವ ಹೈಕಮಾಂಡ್ ಅಂತಿಮ ಆದೇಶ ಹೊರಡಿಸಲಿದೆ. ಒಂದು ವೇಳೆ ಇದನ್ನ ತಿರಸ್ಕರಿಸಿ ನಿಷ್ಠಾವಂತರಿಗೆ ಮಣೆಹಾಕಿದರೆ ನಟರಾಜ್ ಗೌಡ, ಸೂರಜ್ ಹೆಗ್ಡೆ, ನಾಗರಾಜ್ ಯಾದವ್, ಎಸ್ಎಸ್ ಪ್ರಕಾಶಂ, ಶಫಿ ಅಹಮದ್ ಮತ್ತಿತರ ಆಯ್ಕೆಯಾದರೂ ಅಚ್ಚರಿಯಿಲ್ಲ.
ಮೇಲ್ ಮಾಡಿದ ಮುದ್ದಹನುಮೇಗೌಡ?
ಮಾಜಿ ಸಂಸದ ಮುದ್ದಹನುಮೇಗೌಡರಿಂದ ಹೈಕಮಾಂಡ್ ಗೆ ಮೇಲ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇದರಲ್ಲಿ ಅವರು ತಮ್ಮನ್ನ ಮೇಲ್ಮನೆಗೆ ಪರಿಗಣಿಸುವಂತೆ ಕೋರಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ್ದೇನೆ. ರಾಜ್ಯಸಭೆ ಟಿಕೆಟ್ ಕೊಡುವ ಭರವಸೆ ನೀಡಿದ್ರಿ. ಈಗ ರಾಜ್ಯಸಭೆಗೂ ನನಗೆ ಅವಕಾಶ ಮಿಸ್ಸಾಗಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ನನಗೆ ಅನ್ಯಾಯ ಆದಾಗಲೂ ಬೇಸರಿಸಿಕೊಂಡಿಲ್ಲ. ಇವತ್ತಿಗೂ ನನ್ನ ಪಕ್ಷ ನಿಷ್ಠೆ ಹಾಗೆಯೇ ಉಳಿದಿದೆ. ಈಗ ಮೇಲ್ಮನೆಗಾದರೂ ನನ್ನನ್ನ ಪರಿಗಣಿಸಿ. ನಾನು ಟಿಕೆಟ್ ಗಾಗಿ ಯಾವುದೇ ಲಾಬಿ, ಒತ್ತಡ ಮಾಡಲ್ಲ. ಎಲ್ಲವೂ ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಯಾವ ತೀರ್ಮಾನ ತೆಗೆದುಕೊಂಡ್ರೂ ನಾನು ಅದಕ್ಕೆ ಬದ್ಧ. ನನ್ನ ಪಕ್ಷ ನಿಷ್ಠೆ ಹಾಗೆಯೇ ಮುಂದುವರಿಯುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ ಎಂಬ ಮಾಹಿತಿ ಇದೆ.
ಅತ್ಯಂತ ಹಳೆಯ ಪಕ್ಷ ನಮ್ಮದು:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ, ಪಕ್ಷದಲ್ಲಿ ಬಹಳ ಜನ ವರ್ಕರ್ಸ್, ಲೀಡರ್ಸ್ ಇದ್ದಾರೆ. ನಮ್ಮದು ವಿಶ್ವದಲ್ಲೇ ಹಳೆಯ ಪಕ್ಷ. ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಈಗಾಗಲೇ ಒಂದು ರೌಂಡ್ ಚರ್ಚೆ ಮಾಡಿದ್ದೇವೆ. ಮತ್ತೊಂದು ಬಾರಿ ಚರ್ಚೆ ಮಾಡಿ ಫೈನಲ್ ಮಾಡ್ತೇವೆ. ಅಂತಿಮ ಮಾಡಿ ಹೈಕಮಾಂಡ್ ಗೆ ಕಳಿಸಿಕೊಡ್ತೇವೆ ಎಂದಿದ್ದಾರೆ.
ಆಕಾಂಕ್ಷಿಗಳ ಭೇಟಿ:
ಇಂದು ಸಿದ್ದರಾಮಯ್ಯ ನಿವಾಸಕ್ಕೆ ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯೀದ್ ಅಹ್ಮದ್, ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್. ಎಸ್. ಪ್ರಕಾಶಂ ಭೇಟಿ ನೀಡಿದ್ದರು. ಸಿದ್ದರಾಮಯ್ಯ ಭೇಟಿ ಮಾಡಿ ಟಿಕೆಟ್ ಗೆ ಬೇಡಿಕೆ ಇಟ್ಟರು. ಇರುವವರಿಗೆ ನೀವು ಟಿಕೆಟ್ ನೀಡಬೇಡಿ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಿ ಎಂದು ವಿವಿಧ ಘಟಕಗಳ ಮುಖಂಡರು ಒತ್ತಾಯ ಮಾಡಿದರು. ಬೆಂಗಳೂರಿನ ಕುಮಾರಪಾರ್ಕ್ ನಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಶಾಸಕ ಮಾಲೂರು ನಂಜೇಗೌಡ, ಭೈರತಿ ಸುರೇಶ್, ಆಕಾಂಕ್ಷಿ ಕೈಲಾಶ್ ಪಾಟೀಲ್, ಎಂಡಿಎಲ್ ಬೆಂಬಲಿಗರು ಭೇಟಿ ಕೊಟ್ಟರು.
ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮಾತನಾಡಿ, ನಾನು ಪಕ್ಷದಲ್ಲಿ ಹಿರಿಯ, ನಾನೂ ಕೂಡ ಆಕಾಂಕ್ಷಿ. ಮತ್ತೊಮ್ಮೆ ಅವಕಾಶ ಕೊಡುವಂತೆ ಕೇಳಿದ್ದೇನೆ. ಅಧ್ಯಕ್ಷರು, ಖರ್ಗೆ, ಪ್ರತಿಪಕ್ಷ ನಾಯಕರಿಗೂ ಬೇಡಿಕೆ ಇಟ್ಟಿದ್ದೇನೆ. ಚನ್ನಪಟ್ಟಣದಲ್ಲೂ ತಯಾರಿ ಇಲ್ಲದೆ ನಿಂತು ಬಂದಿದ್ದೇನೆ. ಪಕ್ಷದ ನಾಯಕರ ಸೂಚನೆಯಂತೆ ನಿಂತು ಬಂದಿದ್ದೇನೆ. ಮೇಲ್ಮನೆ ಹಿರಿಯ ಸದನ, ಅನುಭವವ ಇರುವವರಿರಬೇಕು. ಇವತ್ತು ಸಂಜೆ ಫೈನಲ್ ಮಾಡ್ತೇವೆ ಅಂದಿದ್ದಾರೆ. ನೊಡೋಣ ಏನ್ಮಾಡ್ತಾರೋ ಗೊತ್ತಿಲ್ಲ ಎಂದರು.