ಬೆಂಗಳೂರು: ರಾಜ್ಯದಲ್ಲಿ ವ್ಯಾಕ್ಸಿನ್ ನೀಡಲು ಆರಂಭಿಸಿದಾಗಿಂದಲೂ ವ್ಯಾಕ್ಸಿನ್‌ಗಾಗಿ ಹಾಹಾಕಾರ ಇದೆ. ಅದರಲ್ಲೂ 18 ವರ್ಷಕ್ಕೂ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲು ಆರಂಭಿಸಿದಾಗಿಂದಲೂ ವ್ಯಾಕ್ಸಿನ್‌ಗಾಗಿ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.
ಪಾಲಿಕೆ ಎಲ್ಲರಿಗೂ ವ್ಯಾಕ್ಸಿನ್ ಪೂರೈಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿತ್ತು. ಹೀಗಾಗಿ ನಗರದಲ್ಲಿ ವ್ಯಾಕ್ಸಿನ್ ವಿತರಣೆಯ ಸಂಪೂರ್ಣ ಮಾಹಿತಿಯನ್ನ ಬಿಬಿಎಂಪಿ ಬಿಡುಗಡೆ ಮಾಡಿದೆ. ಇದುವರೆಗೂ ನಗರದಲ್ಲಿ ಎಷ್ಟು ಜನರು ವ್ಯಾಕ್ಸಿನ್ ಪಡೆದಿದ್ದಾರೆ ಎಂಬುದರ ಅಂಕಿ - ಅಂಶಗಳನ್ನ ನೀಡುವುದರ ಜೊತೆಗೆ ಯಾವ ಪ್ರದೇಶದಲ್ಲಿ ಅತಿಹೆಚ್ಚು ವ್ಯಾಕ್ಸಿನ್ ನೀಡಲಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಒಟ್ಟು 77 ಲಕ್ಷದ 61 ಸಾವಿರದ 893 ಡೋಸ್ ವ್ಯಾಕ್ಸಿನ್‌ಗಳನ್ನು ಇದೀಗ ನೀಡಲಾಗಿದೆ. ಶೇ. 66.82ರಷ್ಟು ಅಂದರೆ 60.54 ಲಕ್ಷ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಶೇ. 18.85ರಷ್ಟು ಜನರು ಮಾತ್ರ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 18ರಿಂದ 44 ವಯಸ್ಸಿನೊಳಗಿನ 33 ಲಕ್ಷ ಜನರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. 44 ವಯಸ್ಸು ಮೇಲ್ಪಟ್ಟ 21.54 ಲಕ್ಷ ಜನರು ಮೊದಲ ಡೋಸ್ ಪಡೆದಿದ್ದಾರೆ.