ಕರ್ನಾಟಕ

karnataka

ETV Bharat / city

ಎಲ್ಲ ಬೋಧಕ - ಬೋಧಕೇತರ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ; ಆರೋಗ್ಯ ಇಲಾಖೆ ಸೂಚನೆ - ಕರ್ನಾಟಕ ಬೋಧಕ - ಬೋಧಕೇತರ ಸಿಬ್ಬಂದಿಗೆ ಲಸಿಕೆ

ಶಿಕ್ಷಕರಿಗೆ ಲಸಿಕೆ ನೀಡಲು ಅಭಿಯಾನ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

covid
ಲಸಿಕೆ

By

Published : Jul 23, 2021, 8:48 AM IST

Updated : Jul 23, 2021, 9:11 AM IST

ಬೆಂಗಳೂರು: ಜುಲೈ 26 ರಿಂದ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕ - ಬೋಧಕೇತರ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.

ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಲಸಿಕೆ ನೀಡಲು ಅಭಿಯಾನ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಸೂಚನೆ

ಸಿಬ್ಬಂದಿ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗೆ ನೀಡಿ:

ಕೋವಿಡ್ ಲಸಿಕೀಕರಣಕ್ಕಾಗಿ ಜಿಲ್ಲೆಯ ಹಾಗೂ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರು, ಬೋಧಕ - ಬೋಧಕೇತರ ಸಿಬ್ಬಂದಿ ಪಟ್ಟಿಯನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಬೇಕು. ಪ್ರತಿ ಶಾಲೆಯ ಮುಖ್ಯಸ್ಥರು ಒಬ್ಬ ನೋಡಲ್ ಅಧಿಕಾರಿಯನ್ನು ನಿಯೋಜಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಅರುಂಧತಿ ಸೂಚಿಸಿದ್ದಾರೆ.

ಸ್ಥಳ, ಸಮಯ ನಿಗದಿ:

ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಪಟ್ಟಿಯಲ್ಲಿನ ಸಂಖ್ಯೆ ಹಾಗೂ ಲಸಿಕೆ ಲಭ್ಯತೆಗೆ ಅನುಗುಣವಾಗಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಿಯಾ ಯೋಜನೆಯಂತೆ ಅರ್ಹ ಫಲಾನುಭವಿಗಳಿಗೆ ಲಸಿಕೀಕರಣದ ಸ್ಥಳ, ದಿನಾಂಕ ಮತ್ತು ಸಮಯದ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:ಪದವಿ ಕಾಲೇಜು ಆರಂಭ: ಕಾಲೇಜಿನಲ್ಲೇ ಲಸಿಕೆ ನೀಡಲು ಮುಂದಾದ ಆರೋಗ್ಯ ಇಲಾಖೆ

ಅರ್ಹ ಫಲಾನುಭವಿಗಳ ಸಂಖ್ಯೆ ಹಾಗೂ ಲಸಿಕೆ ಲಭ್ಯತೆ ಅನುಸಾರ ಶಾಲಾ ಆವರಣ ಅಥವಾ ಆಯ್ದ ಕಾಲೇಜು ಆವರಣದಲ್ಲಿ ಪ್ರಮಾಣಿತ ಕಾರ್ಯಸೂಚಿ ಅನ್ವಯ ಲಸಿಕಾ ಅಭಿಯಾನ ಆಯೋಜಿಸಬೇಕು. ಶಾಲೆಯ ಮುಖ್ಯಸ್ಥರು ತಮ್ಮ ಅಧೀನದ ಸಿಬ್ಬಂದಿ ಲಸಿಕೆ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೈನಂದಿನ ವರದಿ:

ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಜಿಲ್ಲೆಯ ಶಿಕ್ಷಕರು, ಬೋಧಕ - ಬೋಧಕೇತರ ಸಿಬ್ಬಂದಿ ಲಸಿಕೀಕರಣದ ದೈನಂದಿನ ಪ್ರಗತಿಯ ವರ್ಗೀಕೃತ ವರದಿಯನ್ನು ಶಾಲೆಗಳಿಂದ ಪಡೆದು ಲಸಿಕೀಕರಣ ಯಶಸ್ವಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಎಲ್ಲ ಹಂತಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಸಮನ್ವಯತೆಯೊಂದಿಗೆ ಕೇಂದ್ರ ಸರ್ಕಾರದ ಕೋವಿಡ್-19 ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮನ್ವಯ ಸಭೆ ನಡೆಸಿ ಕ್ರಿಯಾ ಯೋಜನೆ ಅನುಷ್ಠಾನ, ಪ್ರಗತಿ ಪರಿಶೀಲನೆಯ ಮೇಲ್ವಿಚಾರಣೆ ನಡೆಸುವಂತೆ ನಿರ್ದೇಶಕಿ ಅರುಂಧತಿ ಸೂಚನೆ ರವಾನಿಸಿದ್ದಾರೆ.

Last Updated : Jul 23, 2021, 9:11 AM IST

ABOUT THE AUTHOR

...view details