ಬೆಂಗಳೂರು:ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಅಸಂಘಟಿತ ಕಾರ್ಮಿಕರ ನೋಂದಣಿ ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು 'ಇ-ಶ್ರಮ್ ಪೋರ್ಟಲ್' ಅಭಿವೃದ್ಧಿಪಡಿಸಿದ್ದು, ಇದರಿಂದ ಅಸಂಘಟಿತ ಕಾರ್ಮಿಕರನ್ನು ಗುರುತಿಸಲಾಗುತ್ತಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ-ಶ್ರಮ ಯೋಜನೆಗೆ ಆಗಸ್ಟ್ 27 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ 1.8 ಕೋಟಿ ಕಾರ್ಮಿಕರ ನೋಂದಣಿಯ ಗುರಿ ಹೊಂದಲಾಗಿದೆ. ನಿಜವಾದ ಅಸಂಘಟಿತ ಕಾರ್ಮಿಕರ ನೋಂದಣಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆ ನಡೆಸುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರಿಯ ದತ್ತಾಂಶ ಸಂಗ್ರಹಿಸಲು ತಂತ್ರಾಂಶ (NDUW-National Database for Unorganised Worker)ವನ್ನು ಅಭಿವೃದ್ಧಿಪಡಿಸಿದೆ.
ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯುತ್ತಾರೆ. ಈ ಅಂಕಿಅಂಶದ ಮಾಹಿತಿ ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗಾಗಿ ವಿಶೇಷ ನೀತಿಗಳು ಮತ್ತು ಯೋಜನೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಇ-ಶ್ರಮ್ ಪೋರ್ಟಲ್‌ನಿಂದ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರಿಗೂ ಅನುಕೂಲ ಆಗುತ್ತದೆ. ಕಾರ್ಮಿಕರು 15 ರೂಪಾಯಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು.
ಪ್ರಯೋಜನಗಳು:
• ಅಸಂಘಟಿತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಅನುಕೂಲವಾಗಲಿದೆ.
• ಈ ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ನೆರವಾಗುತ್ತದೆ.
• ಪ್ರಸ್ತುತ ಇ-ಶ್ರಮ್‌ನಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಒಂದು ವರ್ಷಕ್ಕೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PM-SBY) ಪ್ರಯೋಜನ ಪಡೆಯಬಹುದು. (ಆರೋಗ್ಯ ವಿಮೆಯಾಗಿದ್ದು, ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರ)
• ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ; ಅವರಿಗೆ ಉದ್ಯೋಗ ಅವಕಾಶ ಒದಗಿಸಲು ಸಹಾಯಕ.
• ಪ್ರಸ್ತುತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ನೋಂದಾಯಿತರಾದ ಸುಮಾರು 30.39 ಲಕ್ಷ ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಲಭ್ಯವಿರುವ ಸುಮಾರು 18.00 ಲಕ್ಷ ದತ್ತಾಂಶವನ್ನು ಸಮಗ್ರ ನೋಂದಣಿಗಾಗಿ (Bulk registration) ಕೇಂದ್ರ ಸರ್ಕಾರಕ್ಕೆ ನಿಗದಿತ ನಮೂನೆಯಲ್ಲಿ ಸಲ್ಲಿಸಲು ಕ್ರಮ.
- ಉಳಿದ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರ ನೋಂದಣಿಯನ್ನು ನೇರವಾಗಿ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಇ-ಶ್ರಮ್ ಮೋರ್ಟಲ್‌ನಲ್ಲಿ ಉಚಿತವಾಗಿ ನೋಂದಾಯಿಸಬಹುದು.
- ಈ ಕಾರ್ಡ್ ಜೀವಿತಾವಧಿವರೆಗೆ ಮಾನ್ಯ.
- 14 ಲಕ್ಷ ಮಂದಿ ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ; ಎಲ್ಲಾ ವರ್ಗದ ಸಂಘಟಿತ ಕಾರ್ಮಿಕರು ಇದರಲ್ಲಿ ಬರುತ್ತಾರೆ.