ಬೆಂಗಳೂರು :ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆ ಹೆಚ್ಚಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದಗೌಡ ಹೇಳಿದ್ದಾರೆ.
ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಾವಯವ, ನ್ಯಾನೋ ಗೊಬ್ಬರ ಬಳಕೆ ಹೆಚ್ಚಿಸಿ : ಡಿ ವಿ ಸದಾನಂದ ಗೌಡ ಕರ್ನಾಟಕದ ರೈತರು ಮತ್ತು ಸಹಕಾರಿಗಳನ್ನು ಉದ್ದೇಶಿಸಿ ಇಂದು ವೆಬಿನಾರ್ನಲ್ಲಿ ಮಾತನಾಡಿದ ಸಚಿವರು, ರೈತರು ಮಣ್ಣಿನ ಆರೋಗ್ಯ ಕಾರ್ಡ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಮಣ್ಣಿನ ಆರೋಗ್ಯ ಕಾರ್ಡ್ ಮುಖಾಂತರ ಯಾವ ಭೂಮಿಗೆ, ಯಾವ ಪೋಷಕಾಂಶದ ಅವಶ್ಯಕತೆಯಿದೆ ಎಂಬುದನ್ನು ಪತ್ತೆ ಮಾಡಬಹುದು. ಇದರಿಂದಾಗಿ ಅನವಶ್ಯಕವಾಗಿ ಬಳಸುವ ರಸಗೊಬ್ಬರಗಳನ್ನು ಕಡಿಮೆ ಮಾಡಬಹುದು. ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಹಾಗೂ ಮಣ್ಣು ಆರೋಗ್ಯ ಹೆಚ್ಚಾಗುತ್ತದೆ. ಈ ಗೊಬ್ಬರ ವಿಧಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ದೃಷ್ಟಿಕೋನಕ್ಕೆ ತಕ್ಕಂತೆ ರಸಗೊಬ್ಬರಗಳ ಉತ್ಪಾದನೆ ದೇಶೀಯವಾಗಿ ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿ ಪ್ರೋತ್ಸಾಹಿಸಲು ಇಸ್ರೋ ಕ್ರಮಗಳನ್ನು ಕೈಗೊಂಡಿದೆ ಎಂದರು.
ಮಣ್ಣಿನ ಉತ್ತಮ ಇಳುವರಿಗೆ ಕಾರಣವಾಗುವ ನ್ಯಾನೋ ನಿರ್ವಹಣೆ ಮತ್ತು ನ್ಯಾನೋ ಗೊಬ್ಬರಗಳಂತಹ ಉಪಕ್ರಮಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ. 2023ರ ವೇಳೆಗೆ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಪ್ರಧಾನಿಯವರು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಪ್ರಸ್ತುತ ಶೇ.70ರಷ್ಟು ರಸಗೊಬ್ಬರ ದೇಶೀಯವಾಗಿ ಉತ್ಪಾದನೆಯಾಗುತ್ತಿದೆ. ಉಳಿದ ಶೇ.30ರಷ್ಟು ರಸಗೊಬ್ಬರವೂ ದೇಶೀಯವಾಗಿ ಉತ್ಪಾದಿಸಲು ಗಮನ ಕೇಂದ್ರೀಕರಿಸಲಾಗಿದೆ. ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಉತ್ಪಾದನಾ ಘಟಕಗಳನ್ನು 40,000 ಕೋಟಿ ರೂ. ವೆಚ್ಚದಲ್ಲಿ ಪುನಶ್ವೇತನಗೊಳಿಸಲಾಗುತ್ತದೆ ಎಂದರು.