ಆನೇಕಲ್: ಮೊದಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟದ ಕಾವು ಹೆಚ್ಚಿಸಲಾಗುವುದು ಎಂದು ಕನ್ನಡ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ತಮಿಳುನಾಡು-ಕರ್ನಾಟಕ ಗಡಿ ಭಾಗ ಅತ್ತಿಬೆಲೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಮೇಲಾಗಲಿ, ಕರ್ನಾಟಕದ ಮೇಲಾಗಲಿ ಕಾಳಜಿ ಇಲ್ಲ. ಹಿಂದಿ ಹೇರಿಕೆಯ ಮೇಲಿರುವ ಕಾಳಜಿ ಕನ್ನಡದ ಮೇಲಿಲ್ಲ. ಕನ್ನಡ ಕಾಪಾಡಬೇಕಾದ ಇಲಾಖೆ, ನಿಗಮ, ಪ್ರಾಧಿಕಾರಗಳು ಬಿಜೆಪಿ-ಆರ್ಎಸ್ಎಸ್ ಕೇಂದ್ರಗಳಾಗಿ ಮಾರ್ಪಟ್ಟಿವೆ. ಟಿ.ಎಸ್.ನಾಗಾಭರಣ ಒಬ್ಬ ಆರ್ಎಸ್ಎಸ್ ಮುಖಂಡ. ಇಂತಹವರಿಂದ ಕನ್ನಡ ನಾಡು ಉದ್ಧಾರವಾಗಲ್ಲ ಎಂದು ವಾಟಾಳ್ ಹರಿಹಾಯ್ದರು.
ಮೊದಲು ಹಿಂದಿವಾಲಾಗಳ ವಿರುದ್ಧ ಹೋರಾಟ ರೂಪಿಸಬೇಕು. ಸಿಎಂ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಭಾಷಾಭಿಮಾನವಿಲ್ಲದ ಕರ್ನಾಟಕ ಸರ್ಕಾರ ಒಂದೆಡೆಯಾದರೆ, ಒಂದೇ ಭಾಷೆಯನ್ನು ಬೇರೆ ರಾಜ್ಯಗಳ ಮೇಲೆ ಹೇರುತ್ತಿರುವ ಕೇಂದ್ರ ಸರ್ಕಾರದಿಂದ ಕನ್ನಡ ಮತ್ತು ಕನ್ನಡಿಗರ ಕಗ್ಗೊಲೆಯಾಗುತ್ತಿದೆ ಎಂದು ಕಿಡಿಕಾರಿದರು.