ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್ ಅನ್ಲಾಕ್ ಬಳಿಕ ವಾಯುವಿಹಾರಕ್ಕೆ ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಮಹಿಳೆ ನೀಡಿದ ದೂರು ಆಧರಿಸಿ ತಲಘಟ್ಟಪುರ ನಿವಾಸಿಗಳಾದ ರವಿ ಹಾಗೂ ರಾಹುಲ್ ಎಂಬಾತನನ್ನು ಬಂಧಿಸಿದ್ದು, ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ. ಮಂಡ್ಯ ಮೂಲದ ರವಿ ಕತ್ರಿಗುಪ್ಪೆಯಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ವ್ಯವಹಾರದಲ್ಲಿ ನಷ್ಟವಾಗಿತ್ತು. ಈತನಿಗೆ ಪರಿಚಿತನಾಗಿದ್ದ ರಾಹುಲ್ ವಾಟರ್ ಬಿಸ್ನೆಸ್ ಮಾಡುತ್ತಿದ್ದ. ಇಬ್ಬರಿಗೂ ವ್ಯವಹಾರದಲ್ಲಿ ನಷ್ಟ ಹೊಂದಿದ್ದರು. ಆ ಬಳಿಕ ಹಣ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದಿದ್ದಾರೆ.
ಕಳೆದ ಜೂ. 27ರ ಸಂಜೆ ಬೆಮೆಲ್ ಲೇಔಟ್ನ ವಿವೇಕಾನಂದ ಪಾರ್ಕ್ ಬಳಿ ವಾಕ್ ಮಾಡುತ್ತಿದ್ದ ಮಹಿಳೆಯನ್ನು ಗುರಿ ಮಾಡಿಕೊಂಡು ಬಂದ ಆರೋಪಿ ರವಿ, ಮಂಕಿ ಟೋಪಿ ಹಾಗೂ ಮಾಸ್ಕ್ ಧರಿಸಿ ನಡಿಗೆದಾರನ ಸೋಗಿನಲ್ಲಿ ಬಂದು ಮಹಿಳೆಯ ಸರ ಎಳೆದು ಪರಾರಿಯಾಗಿದ್ದ. ಬಳಿಕ ಅಲ್ಲೇ ಕಾಯುತ್ತಿದ್ದ ರಾಹುಲ್ ಬೈಕಿನಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಕೈಗೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಕೃತ್ಯ ನಡೆದ ಸ್ಥಳದ ಸಮೀಪ ಸೇರಿದಂತೆ ಸುತ್ತಮುತ್ತಲಿನ ಐದು ಕಿ.ಮೀ ವ್ಯಾಪ್ತಿಯ ಸುಮಾರು 25 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳ ಚಲವಲನ ಗೊತ್ತಾಗಿದೆ. ಕೃತ್ಯ ಬಳಿಕ ಕೆಂಗೇರಿಯ ಶಿವನಪಾಳ್ಯದಲ್ಲಿ ತಲೆಮರೆಸಿಕೊಂಡಿರುವುದು ಮಾಹಿತಿ ಅರಿತ ಪೊಲೀಸರು, ಸದ್ಯ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೆಲ ತಿಂಗಳ ಹಿಂದೆ ಹಲವು ಎಟಿಎಂ ದರೋಡೆಗೆ ವಿಫಲ ಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ : ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ