ಬೆಂಗಳೂರು:ಪಕ್ಷದ ರಾಷ್ಟ್ರೀಯ ನಾಯಕರ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ವಿಚಾರವಾಗಿ ಬಿಜೆಪಿ ಮಾಡಿದ ಟೀಕೆಗೆ ಕಾಂಗ್ರೆಸ್ ಪಕ್ಷ ಪ್ರತಿ ಟೀಕೆ ಮಾಡಿದ್ದು, ಟ್ವೀಟ್ಗಳಲ್ಲೇ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರವನ್ನು ಥರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಟ್ವೀಟ್ ಮಾಡಿ, ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ತೊದಲು ನುಡಿಯ ಪಪ್ಪುವಿಗೆ ಪಾಠ ಹೇಳಿ ಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಗಾಂಧಿ ಕುಟುಂಬದ ಸೇವೆಯೇ ದೇಶ ಸೇವೆ ಎಂದು ಲೇವಡಿ ಮಾಡಿ ರಾಹುಲ್ ಗಾಂಧಿ ಭಾಷಣದ ತುಣುಕನ್ನು ಲಗತ್ತಿಸಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷಕ್ಕಾಗಿ, ದೇಶಕ್ಕಾಗಿ ಬದುಕು ಸವೆಸಿದ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಪಕ್ಷ ಸಂಘಟಿಸುವ ಸಂಸ್ಕೃತಿ ನಮ್ಮಲ್ಲಿದೆ. ನೀವು ಅಡ್ವಾಣಿ, ಮು.ಮ ಜೋಶಿಯವರನ್ನ ಮೂಲೆಗೆ ಕೂರಿಸಿದಂತೆ ನಮ್ಮಲ್ಲಿಲ್ಲ. ಹೇಡಿ ಫೆಕೇಂದ್ರನಿಗೆ ತಾಕತ್ತಿದ್ದರೆ ಒಂದೇ ಒಂದು ಪತ್ರಿಕಾಗೋಷ್ಠಿ ಹಾಗೂ ಟೆಲಿಪ್ರಾಂಪ್ಟರ್ ಇಲ್ಲದೆ ಭಾಷಣ ಮಾಡಲು ಹೇಳಿ ಎಂದು ಸವಾಲು ಹಾಕಿದೆ.