ಬೆಂಗಳೂರು: ತೇಲುವ ಚಿನ್ನ ಎಂದ ಖ್ಯಾತಿ ಹೊಂದಿರುವ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿರುವ 80 ಕೋಟಿ ಬೆಲೆ ಬಾಳುವ 80 ಕೆ.ಜಿ. ಆ್ಯಂಬರ್ ಗ್ರೀಸ್ ಅಥವಾ ತಿಮಿಂಗಿಲ ವಾಂತಿ ಹಾಗೂ 203 ವರ್ಷಗಳ ಹಿಂದಿನ ವಸ್ತುಗಳನ್ನು ಕದ್ದು ಮಾರಾಟಕ್ಕೆ ಯತ್ನಿಸಿದ್ದ ಐವರು ಖತರ್ನಾಖ್ ಖದೀಮರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
80 ಕೋಟಿ ಮೌಲ್ಯದ ತಿಮಿಂಗಿಲ ವಾಂತಿ, ಪುರಾತನ ವಸ್ತುಗಳು ವಶ: ಬೆಂಗಳೂರಿನಲ್ಲಿ ಐವರ ಬಂಧನ ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40) ಸಂತೋಷ್ (31), ಜಗನ್ನಾಥ ಆಚಾರ್ (52) ಬಂಧಿತರು. ಆರೋಪಿಗಳೆಲ್ಲರೂ ಬೆಂಗಳೂರಿನವರಾಗಿದ್ದು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಎಂ.ಕೆ. ಎಂಟರ್ ಪ್ರೈಸಸ್ನಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಇಟ್ಟಿರುವ ಬಗ್ಗೆ ಸಿಸಿಬಿ ಮಾಹಿತಿ ಕಲೆಹಾಕಿತ್ತು.
ನಂತರ ಸಿಸಿಬಿ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ದಾಳಿ ಐವರು ಆರೋಪಿಗಳನ್ನು ಬಂಧಿಸಿ, 80 ಕೋಟಿ ಮೌಲ್ಯದ ಆ್ಯಂಬರ್ ಗ್ರೀಸ್, 203 ವರ್ಷದ ಬ್ರಿಟಿಷ್ ಈಸ್ಟ್ ಇಂಡಿಯಾ-1818 ಎಂದು ಬರೆದಿರುವ ಸ್ಟೀಮ್ ಫ್ಯಾನ್, ಇದೇ ಕಂಪೆನಿಯ ಎರಡು ರೆಡ್ ಮರ್ಕ್ಯುರಿಯ ಎರಡು ತಾಮ್ರದ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಏನಿದು ಆ್ಯಂಬರ್ ಗ್ರೀಸ್?
ಸ್ಪರ್ಮ್ ವೇಲ್ ಪ್ರಭೇದದ ತಿಮಿಂಗಿಲ ಹೊರಹಾಕುವ ವಾಂತಿಯನ್ನು ಆ್ಯಂಬರ್ ಗ್ರೀಸ್ ಎಂದು ಕರೆಯಾಗುತ್ತದೆ. ಘನ ಮೇಣದ ರೀತಿಯಲ್ಲಿದ್ದು, ವಾಸನೆಯಿಂದ ಕೂಡಿರಲಿದೆ. ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಆ್ಯಂಬರ್ ಗ್ರೀಸ್ ಸುಮಾರು ಒಂದು ಕೋಟಿ ರೂಪಾಯಿ ಬೆಲೆಯಿದೆ.
ಪರ್ಫ್ಯೂಮ್ಗಾಗಿ ಬಳಕೆಯಾಗುವ ಈ ಆ್ಯಂಬರ್ ಗ್ರೀಸ್ ಭಾರತದಲ್ಲಿ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಸಂಶೋಧನೆಗಾಗಿ ಮಾತ್ರ ಬಳಸಬಹುದಾಗಿದೆ. ದುಬಾರಿ ಸುಗಂಧದ್ರವ್ಯದಲ್ಲಿ ಅತಿಯಾಗಿ ಬಳಕೆಯಾಗುವ ಆ್ಯಂಬರ್ ಗ್ರೀಸ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅಕ್ರಮ ಸಂಗ್ರಹಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಕ್ರಮ ಜಾಲದ ವಿರುದ್ಧ ಸಿಸಿಬಿ ಕಣ್ಣಿಟ್ಟಿತ್ತು. ಈ ಹಿಂದೆ ಕೆ.ಜಿ.ಹಳ್ಳಿ ಪೊಲೀಸರು 8 ಕೆ.ಜಿ.ಮೌಲ್ಯದ ಆ್ಯಂಬರ್ ಗ್ರೀಸ್ ಜಪ್ತಿ ಮಾಡಿ ಮೂವರನ್ನು ಬಂಧಿಸಿದ್ದರು.
80 ಕೋಟಿ ಮೌಲ್ಯದ ಆ್ಯಂಬರ್ ಗ್ರೀಸ್ ಹಾಗೂ ಬ್ರಿಟಿಷ್ ಕಾಲದ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪಿಗಳು ಯಾರಿಗೆ ಮಾರಾಟ ಮಾಡಲು ಯತ್ನಿಸಿದ್ದರು?, ಆ್ಯಂಬರ್ ಗ್ರೀಸ್ ಅನ್ನು ಎಲ್ಲಿಂದ ತರಿಸಿಕೊಂಡಿದ್ದರು? ಹಾಗೂ ಪುರಾತನ ಕಾಲದ ವಸ್ತುಗಳನ್ನು ಎಲ್ಲಿಂದ ಕಳ್ಳತನ ಮಾಡಿದ್ದರು? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:2024ರ ವೇಳೆಗೆ ಪ್ರತಿ 1,000 ಜನಸಂಖ್ಯೆಗೆ ಓರ್ವ ವೈದ್ಯ: ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್