ಬೆಂಗಳೂರು :ದೇಶದೆಲ್ಲೆಡೆ 75ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ, ನಮ್ಮ ತ್ರಿವರ್ಣ ಧ್ವಜವನ್ನು ವಿಶೇಷವಾಗಿ ತೋರಿಸುವ ಹಂಬಲ ಇರುತ್ತೆ. ಹೀಗಾಗಿ ಭಾರತದ ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ವೇದಿಕೆಯಾದ ವೇ ಕೂಲ್ ಫುಡ್ಸ್ ಸಂಸ್ಥೆ, ಸುಮಾರು 20 ಟನ್ ತೂಕದ ವಿವಿಧ ತರಕಾರಿಗಳನ್ನು ಒಳಗೊಂಡಂತೆ ಗ್ರ್ಯಾಂಡ್ ಇಂಡಿಯನ್ ಫುಡ್ ಫ್ಲ್ಯಾಗ್ ಅನ್ನು ರಚಿಸಿದೆ.
ಭಾರತದ ಪ್ರಮುಖ ಆಹಾರ ಮತ್ತು ಕೃಷಿ ತಂತ್ರಜ್ಞಾನ ವೇದಿಕೆಯಾದ ವೇ ಕೂಲ್ ಫುಡ್ಸ್, ಬೆಂಗಳೂರಿನ ಕನ್ನಮಂಗಲದಲ್ಲಿರುವ ಅದರ ವಿತರಣಾ ಕೇಂದ್ರದ ಬಳಿ 75ನೇ ಸ್ವಾತಂತ್ರ‍್ಯ ದಿನಾಚರಣೆ - ಆಜಾದಿ ಕಾ ಅಮೃತ್ ಮಹೋತ್ಸವ ಸಂಸ್ಮರಣಾರ್ಥ ಇಂದು ಸುಮಾರು 7632 ಚದರ್ ಅಡಿಗಳಷ್ಟು ವಿಸ್ತಾರವಾದ ಆಹಾರ ಧ್ವಜವನ್ನು ರಚಿಸಿದೆ.
ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಪ್ರಗತಿ.. ಹಿಂದೆ ಆಹಾರದ ಕೊರತೆ ಎದುರಿಸುತ್ತಿದ್ದ ದೇಶಗಳ ಪಟ್ಟಿಯಲ್ಲಿದ್ದ ಭಾರತವು ಇಂದು ಅಗತ್ಯಕ್ಕಿಂತ ಹೆಚ್ಚು ಆಹಾರ ಉತ್ಪಾದನೆಯಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ಜಗತ್ತಿಗೆ ಆಹಾರ ಶಕ್ತಿ ಕೇಂದ್ರವಾಗುವತ್ತ ಸಾಗಿದೆ. ಅದರ ಪ್ರಯಾಣದ ಸಂಕೇತ ಈ ಆಹಾರದ ಧ್ವಜವಾಗಿದೆ. ಇಂದು ಭಾರತ ವಿಶ್ವದ ಹಣ್ಣುಗಳು ಮತ್ತು ತರಕಾರಿಗಳ ಅತಿದೊಡ್ಡ ಉತ್ಪಾದಕರಲ್ಲಿ ಭಾರತವೂ ಒಂದಾಗಿದೆ.
ಹರ್ ಘರ್ ತಿರಂಗಾ ಭಾಗವಾಗಿ ಧ್ವಜ ರಚನೆ.. ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ, ವೇಕೂಲ್ ಸಂಸ್ಥೆ ಭಾರತದಲ್ಲಿ ಬೆಳೆದ ತಾಜಾ ಉತ್ಪನ್ನಗಳಾದ ಕ್ಯಾರೆಟ್, ಮೂಲಂಗಿ, ಹಸಿರು ಬೆಂಡೆಕಾಯಿ, ಬೀನ್ಸ್, ಕ್ಯಾಪ್ಸಿಕಂ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಾದ ಪೊಟ್ಯಾಟೊ ಫ್ಲೇಕ್ಸ್ ಮುಂತಾದವುಗಳ ಉತ್ತಮ ಆಯ್ಕೆಯೊಂದಿಗೆ ಧ್ವಜದ ತ್ರಿವರ್ಣಗಳನ್ನು ಯಶಸ್ವಿಯಾಗಿ ಮರುಸೃಷ್ಟಿಸಿದೆ.