ಬೆಂಗಳೂರು: ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಸೋಂಕಿತರ ಪಕ್ಕದಲ್ಲೇ ಕೋವಿಡ್ನಿಂದ ಸಾವನ್ನಪ್ಪಿದವರ ಮೃತದೇಹವನ್ನು ಇಟ್ಟಿರುವ ಘಟನೆ ನಡೆದಿದೆ. ರೋಗಿಗಳ ಪಕ್ಕದಲ್ಲೇ ಡೆಡ್ ಬಾಡಿ ಇಟ್ಟು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ. ಇದು ಸೋಂಕಿತರ ಮನಸ್ಥಿತಿ ಮೇಲೆ ಇನ್ನಷ್ಟು ಕೆಟ್ಟ ಪರಿಣಾಮ ಬೀರಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ಸಿಬ್ಬಂದಿ ಅಥವಾ ವೈದ್ಯರ ನಿರ್ಲಕ್ಷ್ಯ ಖಂಡಿತಾ ಅಲ್ಲ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ
ಕಳೆದ ನಾಲ್ಕು ದಿನಗಳ ಹಿಂದೆ ಶಂಕರಮಠ ವಾರ್ಡ್ ನಿವಾಸಿಯಾಗಿದ್ದ 73 ವರ್ಷದ ಮಹಿಳೆಗೆ ಕೊರೊನಾ ದೃಢವಾಗಿದ್ದು, ರಾಜಾಜಿನಗರ ಇಎಸ್ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೇ ವೇಳೆ, ಮಾಜಿ ಕಾರ್ಪೋರೇಟರ್ ಎಮ್.ಶಿವರಾಜು ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ಭೇಟಿ ನೀಡಿ ವೃದ್ಧೆ ಹಾಗೂ ಇತರ ಸೋಂಕಿತರ ಸಮಸ್ಯೆ ಆಲಿಸಿದ್ದರು.
ಈ ವೇಳೆ, ಇಎಸ್ಐ ಆಸ್ಪತ್ರೆಯ ಕೋವಿಡ್ ಸೋಂಕಿತರು ಇರುವ ಆವರಣದಲ್ಲೇ ಮರಣ ಹೊಂದಿದವರ ಶವ ಇಟ್ಟಿದ್ದು, ಇದರಿಂದ ಸೋಂಕಿತರು ಮಾನಸಿಕವಾಗಿ ನರಳುವಂತಾಗಿದೆ ಎಂದು ಎಮ್.ಶಿವರಾಜು ಆತಂಕ ವ್ಯಕ್ತಪಡಿಸಿ, ಆಸ್ಪತ್ರೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.