ಬೆಂಗಳೂರು: ಅಧಿಕಾರಿಗಳನ್ನು ವರ್ಗಾವಣೆ ಮಾಡುವ ವೇಳೆ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಧಿಕಾರಿಗಳ ವರ್ಗಾವಣೆ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿರಬೇಕು: ಹೈಕೋರ್ಟ್
ಅವಧಿಪೂರ್ವ ವರ್ಗಾವಣೆ ಮಾಡುವ ವೇಳೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ತಿಳಿಸಿದೆ.
ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಕೆಪಿಟಿಸಿಎಲ್ ನಿರ್ದೇಶಕರಾಗಿದ್ದ ಸಿದ್ದರಾಜು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವ ವೇಳೆ ನ್ಯಾ.ಆರ್.ದೇವದಾಸ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ಗಳು ನೀಡಿರುವ ಆದೇಶಗಳನ್ನು ಗಮನಿಸದೇ ಮಾಡುತ್ತಿರುವ ವರ್ಗಾವಣೆ ಆದೇಶಗಳು ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಸಂವಿಧಾನ ಎಷ್ಟೇ ಒಳ್ಳೆಯದಿದ್ದರೂ ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿರದಿದ್ದರೆ ಕೆಟ್ಟದಾಗಿ ಕಾಣಿಸುತ್ತದೆ. ಹಾಗೆಯೇ ಕೆಟ್ಟ ಸಂವಿಧಾನವನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಿದ್ದರೆ ಅದು ಒಳ್ಳೆಯದಾಗಿಯೇ ಕಾಣಿಸುತ್ತದೆ ಎಂದು ಡಾ. ಬಿ. ಆರ್ ಅಂಬೇಡ್ಕರ್ ಅವರ ಸಾಲುಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ.
2019ರಲ್ಲಿ ಕೆಪಿಟಿಸಿಎಲ್ ನಿರ್ದೇಶಕರಾಗಿ ನೇಮಕವಾಗಿದ್ದ ಸಿದ್ದರಾಜು ಅವರನ್ನು ಸರ್ಕಾರ ಎರಡು ವರ್ಷ ತುಂಬುವ ಮೊದಲೇ 2020ರ ಅಕ್ಟೋಬರ್ನಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಿತ್ತು. ಈ ಜಾಗಕ್ಕೆ ಬಿ.ಕೆ ಉದಯ್ ಕುಮಾರ್ ಅವರನ್ನು ನಿಯೋಜಿಸಿತ್ತು. ಇದನ್ನು ಪ್ರಶ್ನಿಸಿ ಸಿದ್ದರಾಜು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. 2021ರ ಜನವರಿಯಲ್ಲಿ ಉದಯ್ ಕುಮಾರ್ ನಿವೃತ್ತಿಯಾಗಲಿದ್ದರೆ, ಸಿದ್ದರಾಜು ಏಪ್ರಿಲ್ನಲ್ಲಿ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಾಜ್ಯ ಸಂಬಂಧ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು ಇತ್ಯರ್ಥಪಡಿಸಿದೆ.