ನೆಲಮಂಗಲ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಶಿವಕುಮಾರ್ ಮನೆಗೆ ಭೇಟಿ ನೀಡಿದ ಜೆಡಿಎಶ್ ಶಾಸಕ ಶ್ರೀನಿವಾಸ್ ಮೂರ್ತಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ : ಮೃತ ಜೆಡಿಎಸ್ ಮುಖಂಡರ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ
ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟದಲ್ಲಿ ರಾಜ್ಯದ ಮೂವರು ಜೆಡಿಎಸ್ ಮುಖಂಡರು ಮೃತಪಟ್ಟಿದ್ದಾರೆ. ಹೀಗಾಗಿ ಮೃತರ ಕುಟುಂಬಸ್ಥರಿಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಮೂರ್ತಿ ಸಾಂತ್ವನ ಹೇಳಿದ್ದಾರೆ. ಆದರೆ, ಇನ್ನುಳಿದವರು ಪತ್ತೆಯಾಗದ್ದಕ್ಕೆ ಆತಂಕ ಹೆಚ್ಚಿದೆ.
ಕೊಲಂಬೊದ ಹೋಟೆಲ್ವೊಂದರಲ್ಲಿ ವಾಸ್ತವ್ಯ ಹೂಡಿದ್ದ 7 ಮಂದಿಯಲ್ಲಿ ಜೆಡಿಎಸ್ ಮುಖಂಡರಾದ ಹನುಮಂತರಾಯಪ್ಪ, ರಂಗಪ್ಪ ಮತ್ತು ಶಿವಕುಮಾರ್ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ಮುಗಿದ ನಂತರ ಮೃತ ಮೂವರು ಸೇರಿದಂತೆ ಒಟ್ಟು ಏಳು ಜನರು ಪ್ರವಾಸಕ್ಕೆ ತೆರೆಳಿದ್ದಾಗ ಈ ಘಟನೆ ಸಂಭವಿಸಿದೆ. ಆದರೆ, ಇನ್ನುಳಿದವರ ಪತ್ತೆಯಾಗಿಲ್ಲ.
ಸುಭಾಷ್ ನಗರದಲ್ಲಿರುವ ಮೃತ ಶಿವಕುಮಾರ್ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀನಿವಾಸ್ ಮೂರ್ತಿ, ಮೂರು ಜನರ ಸಾವು ಬಹಳ ನೋವು ತಂದಿದೆ. ಇಂದು ನೆಲಮಂಗಲದ ಜನತೆಗೆ ಶೋಕದ ದಿನ. ಮೃತ ಜೆಡಿಎಸ್ ಮುಖಂಡರು ನೆಲಮಂಗಲಕ್ಕೆ ಉತ್ತಮ ಸಮಾಜಸೇವೆ ಮಾಡಿದ್ದರು. ಮೃತ ದೇಹ ತರಲು ಈಗಾಗಲೇ ನಾಲ್ಕು ಜನ ಕೊಲಂಬೊಗೆ ಹೋಗುವ ತಯಾರಿಯಲ್ಲಿದ್ದಾರೆ. ನನಗೆ ವೀಸಾ ದೊರೆತರೆ ತಾವೂ ಸಹ ಹೋಗುವುದಾಗಿ ತಿಳಿಸಿದರು.