ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳ ಕುರಿತು ಸರ್ಕಾರ ಕೂತು ಚರ್ಚೆ ಮಾಡಬೇಕಿತ್ತು. ಅವರನ್ನ ಸರ್ಕಾರ ವಿಶ್ವಾಸಕ್ಕೆ ತೆಗದುಕೊಂಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸಾರಿಗೆ ನೌಕರರ ಅನಿರ್ದಿಷ್ಟವಾಧಿ ಮುಷ್ಕರ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಎಚ್ಎಂ ರೇವಣ್ಣ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭ ಮಾತನಾಡಿ, ನಮ್ಮ ಅವಧಿಯಲ್ಲೂ ಸಾರಿಗೆ ಇಲಾಖೆಯಿಂದ ಮುಷ್ಕರ ಮಾಡಿದ್ದರು. ನಾವು ಸಾರಿಗೆ ಇಲಾಖೆ ನೌಕರರನ್ನ ವಿಶ್ವಾಸಕ್ಕೆ ತೆಗದುಕೊಂಡು ವೇತನ ಹೆಚ್ಚಳ ಮಾಡಿದ್ದೆವು. ಸರ್ಕಾರ ಹಠ ಬಿಟ್ಟು ಅವರ ಜೊತೆ ಮಾತನಾಡಬೇಕು. ಸರ್ಕಾರಿ ನೌಕರರ ನೇಮಕಾತಿ, 6ನೇ ವೇತನ ಆಯೋಗದ ಬಗ್ಗೆ ಅವತ್ತೇ ಸ್ಪಷ್ಟಪಡಿಸಿಬೇಕಿತ್ತು. ಮಾಡೋಣ, ನೋಡೋಣ ಅಂತ ಹೇಳಿದ್ದರು, ಅದರ ಪರಿಣಾಮ ಮುಷ್ಕರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು ಸಿಎಂ ಮನಸ್ಸು ಮಾಡಿದ್ರೆ ಒಂದೇ ದಿನದಲ್ಲಿ ಸಮಸ್ಯೆ ಬಗೆಹರಿಸಬಹುದು. ಯೂನಿಯನ್ ಅವರು ಹಠ ಮಾಡುವುದು ಕಡಿಮೆ ಮಾಡಬೇಕು. ಸರ್ಕಾರ ಖುದ್ದು ಮಾತುಕತೆಗೆ ಕರೆಯಬೇಕು. ನಾನು ಸಾರಿಗೆ ಸಚಿವನಾಗಿದ್ದಾಗ ಸಿಎಂ ಜತೆ ಚರ್ಚೆ ಮಾಡಿ ಬಗೆಹರಿಸಿದ್ದೆ. ಯಡಿಯೂರಪ್ಪ ವಿಪಕ್ಷದಲ್ಲಿ ಇದ್ದಾಗ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ರು. ಈಗ ತಂದೆ ಸ್ಥಾನದಲ್ಲಿ ಯಡಿಯೂರಪ್ಪ ಇದ್ದಾರೆ. ನೌಕರರು ಮಕ್ಕಳ ಸ್ಥಾನದಲ್ಲಿ ಇದ್ದಾರೆ. ಹೀಗಾಗಿ ಪ್ರತಿಷ್ಠೆ ಕೈ ಬಿಟ್ಟು ಸಮಸ್ಯೆ ಬಗೆಹರಿಸಿ ಎಂದರು.
ಮಾಜಿ ಸಚಿವ ಎಚ್.ಎಂ ರೇವಣ್ಣ ಮಾತನಾಡಿ, ಅನುಭವ ಇಲ್ಲದ ಸಾರಿಗೆ ಸಚಿವ, ಹಠಮಾರಿ ಸಿಎಂನಿಂದ ಮುಷ್ಕರ ನಡೆಯುತ್ತಿದೆ. ಅವರನ್ನ ಕರೆಸಿ ಸಂಧಾನ ಸಭೆ ಮಾಡಬೇಕಿತ್ತು. ಇದುವರೆಗೂ ಸಂಧಾನ ಸಭೆ ಮಾಡಿಲ್ಲ. ಸಾರಿಗೆ ಸಂಸ್ಥೆಯನ್ನ ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ ಎಂಬ ಅನುಮಾನ ಬರುತ್ತಿದೆ. ಯಾಕೆಂದ್ರೆ ದೇಶದಲ್ಲಿ ಬಿಎಸ್ಎನ್ಎಲ್ ಸೇರಿ ಹಲುವು ಸಂಸ್ಥೆಯನ್ನ ಖಾಸಗೀಕರಣ ಮಾಡಿದೆ. ಇನ್ಸೂರೆನ್ಸ್ ,ಟ್ಯಾಕ್ಸ್, ಎಫ್ಸಿ ಇಲ್ಲಾದೇ ಖಾಸಗಿ ಬಸ್ ಓಡಿಸುತ್ತಿದ್ದಾರೆ. ಅಪಘಾತ ಆದರೆ ಇದಕ್ಕೆ ಯಾರು ಹೊಣೆ? ಸಾರಿಗೆ ಸಚಿವರು ಈ ಮಾತು ಹೇಳೋದು ಸರೀನಾ? ಸಾರಿಗೆ ಸಚಿವರಿಗೆ ಡಿಪೋದಲ್ಲಿ ಡಿಸೇಲ್ ಹಾಕಿಸೋದಕ್ಕೆ ಬರುತ್ತೆ. ಸಮಸ್ಯೆ ಬಗೆಹರಿಸಲು ಇವರು ಹೋಗುತ್ತಿಲ್ಲ. ಈ ಬಗ್ಗೆ ಬೇಕಾದ್ರೆ ಸರ್ವಪಕ್ಷ ಸಭೆ ಕರೆದು ಚರ್ಚೆ ಮಾಡಿ. ಸಾರಿಗೆ ಇಲಾಖೆ ನೌಕರರನ್ನ ಕರೆದು ಮೊದಲು ಸಂಧಾನ ಸಭೆ ಮಾಡಲಿ ಎಂದರು.
ಇದನ್ನೂ ಓದಿ..ಪ್ರಧಾನಿ ಲಕ್ಷಗಟ್ಟಲೆ ಜನ ಸೇರಿಸಿ ಭಾಷಣ ಮಾಡುವಾಗ ಕೊರೊನಾ ಹರಡಲ್ವಾ: ರಾಮಲಿಂಗಾರೆಡ್ಡಿ ಪ್ರಶ್ನೆ