ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರು ಮಹಾನಗರ ವ್ಯಾಪ್ತಿಯ ಕಾಂಗ್ರೆಸ್ ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದ್ದೇವೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಸಂಸದರು, ಬೆಂಗಳೂರು ಮುಖಂಡರ ಸಭೆ ನಡೆಸಿದ್ದೇವೆ. ಈಗಾಗಲೇ 243 ವಾರ್ಡ್ ಮಾಡಲಾಗಿದೆ. ಬಿಬಿಎಂಪಿ ಚುನಾವಣೆ ಬೇಗ ನಡೆಸಬೇಕು. ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದೇವೆ. ಹಿಂದೆ ಬಿಜೆಪಿಯವರು 8,500 ಕೋಟಿ ರೂ. ಸಾಲ ಹೊರಿಸಿದ್ದರು. ಟಿಡಿಆರ್ ಹಗರಣ ಮಾಡಿ ಹೋಗಿದ್ದರು. ಈಗ ಜನರ ಮೇಲೆ ಒಂದೊಂದೇ ತೆರಿಗೆ ಹಾಕುತ್ತಿದ್ದಾರೆ. ಚುನಾವಣೆ ಅನ್ನುವ ಕಾರಣಕ್ಕೆ ಘನ ತ್ಯಾಜ್ಯದ ಮೇಲಿನ ಕೇಸನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಇವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ತಕ್ಷಣ ಅದನ್ನು ಜಾರಿಗೆ ತರುತ್ತಾರೆ ಎಂದರು.