ಕರ್ನಾಟಕ

karnataka

By

Published : Oct 18, 2019, 9:16 PM IST

ETV Bharat / city

ಶಿಕ್ಷಕ, ಪದವೀಧರ ಚುನಾವಣೆ ಸಂಬಂಧ ಸಭೆಗೆ ಹೆಚ್​ಡಿಕೆ, ಹೆಚ್​ಕೆಕೆ ಗೈರು: ದೇವೇಗೌಡರು ಹೇಳಿದ್ದೇನು?

ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಜೆಡಿಎಸ್​ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಸಭೆ ನಡೆಸಿದರು. ಆದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಅವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತಿತ್ತು​.

teacher-graduate-election-meeting

ಬೆಂಗಳೂರು: ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸಭೆ ನಡೆಸಿದರು. ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಚರ್ಚೆ ಜೊತೆಗೆ ಶಾಸಕರ ಅಸಮಾಧಾನದ ಬಗ್ಗೆಯೂ ದೇವೇಗೌಡರು ಸಭೆ ನಡೆಸಿದರು ಎನ್ನಲಾಗ್ತಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಭೆ ನಡೆಸಲಾಗಿದೆ. ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದರು.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ

ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳ ಬಗ್ಗೆ ಶಾಸಕರು, ಪರಿಷತ್ ಸದಸ್ಯರೊಂದಿಗೆ ಚರ್ಚಿಸಿದ್ದೇನೆ. ಎ.ಪಿ.ರಂಗನಾಥ್ ಶಿಕ್ಷಕರ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಿಂದ ಚೌಡರೆಡ್ಡಿ ತೂಪಲ್ಲಿ, ರಮೇಶ್ ಬಾಬು, ಶಿವಶಂಕರ್ ಅವರು ಮುಂಚೂಣಿಯಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.

ಕಾರ್ಯ ನಿಮಿತ್ತ ಬಸವರಾಜ್ ಹೊರಟ್ಟಿ, ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ, ಕೃಷ್ಣಾರೆಡ್ಡಿ ಅವರು ಸಭೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ನನ್ನ ಗಮನಕ್ಕೂ ತಂದಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೈತ್ರಿ ಸರ್ಕಾರದಲ್ಲಿ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಆಗಲಿಲ್ಲ. ಹೀಗಾಗಿ ಅಸಮಾಧಾನ ಇರುವವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ ಎಂದರು.

ಬಸವರಾಜ ಹೊರಟ್ಟಿಯವರು ಜೆಡಿಎಸ್ ಬಿಡುವ ಪ್ರಶ್ನೇಯೆ ಇಲ್ಲ. ಇವತ್ತಿನ ಸಭೆಗೆ ಬರೋಕೆ ಆಗಲ್ಲ ಎಂಬ ಸಂದೇಶ ಕಳುಹಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೀಪಾವಳಿ ನಂತರ ಶಾಸಕರು, ವಿಧಾನ ಪರಿಷತ್ ಸದಸ್ಯರ ಸಭೆ ಕರೆಯಲು ನಿರ್ಧರಿಸಲಾಗಿದೆ. ನವೆಂಬರ್ ಎರಡರೊಳಗೆ ಸಭೆ ಕರೆಯುತ್ತೇನೆ. ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಒಟ್ಟಾಗಿ ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳುವುದಕ್ಕೆ ಶಕ್ತಿ ಮೀರಿ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಐದಾರು ತಂಡಗಳನ್ನು ಮಾಡಿಕೊಂಡು ಪಕ್ಷ ಸಂಘಟಿಸುತ್ತೇವೆ. ಅ.22ಕ್ಕೆ ತೀರ್ಪು ಏನಾದರೂ ಬರಲಿ. ಆದರೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಶ್ರೀನಿವಾಸ್ (ವಾಸು), ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಶರವಣ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ABOUT THE AUTHOR

...view details