ಕುಂದು-ಕೊರತೆಗಳ ನಡುವೆಯೇ ಕಸ ನಿರ್ವಹಣೆ ಸುಧಾರಣೆಯತ್ತ ಬಿಬಿಎಂಪಿ ಹೆಜ್ಜೆ
ಬಿಬಿಎಂಪಿ ವ್ಯಾಪ್ತಿಯಲ್ಲಿ 350 ಬ್ಲಾಕ್ಸ್ಪಾಟ್ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದೇವೆ. ಇನ್ನೂ 1200 ಬ್ಲಾಕ್ಸ್ಪಾಟ್ಗಳಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಡಿ.ರಂದೀಪ್ ಹೇಳಿದರು.
ಬಿಬಿಎಂಪಿ
By
Published : Dec 10, 2020, 5:06 PM IST
ಬೆಂಗಳೂರು:ರಸ್ತೆ ಬದಿಗಳಲ್ಲಿ, ಖಾಲಿ ಜಾಗಗಳಲ್ಲಿ ಬಿಸಾಡುತ್ತಿದ್ದ ಕಸವನ್ನು ಪ್ರತಿದಿನ ತಪ್ಪದೇ ವಿಲೇವಾರಿ ಮಾಡುವ ಮೂಲಕ ಬ್ಲಾಕ್ಸ್ಪಾಟ್ ಆಗದಂತೆ ತಡೆಯುವಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. ಇಷ್ಟಾದರೂ ನಗರದಲ್ಲಿ ಕಸದ ಸಮಸ್ಯೆ ಸಂಪೂರ್ಣ ಇತ್ಯರ್ಥಗೊಂಡಿಲ್ಲ.
ಹೊಸ ಟೆಂಡರ್ ಜಾರಿ, ಘಟಕಗಳ ವೈಜ್ಞಾನಿಕ ನಿರ್ವಹಣೆ ಕೊರತೆ, ಕ್ವಾರಿಗಳ ಸಮಸ್ಯೆ, ಕಸದಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನು ತೆರೆಯುವಲ್ಲಿ ವಿಳಂಬ, ಕಸ ವಿಂಗಡಣೆ ಪ್ರಮಾಣ, ಕಸದ ವಾಹನಗಳ ಜಿಪಿಎಸ್ ಮ್ಯಾಪಿಂಗ್, ಆನ್ಲೈನ್ ಮ್ಯಾಪಿಂಗ್ಗಳಲ್ಲಿ ಹಿಂದೆ ಬಿದ್ದಿದೆ. ಹೀಗಾಗಿ, ಕಸ ಮುಕ್ತ ಬೆಂಗಳೂರಿಗೆ ಈ ಎಲ್ಲವೂ ಸುಧಾರಣೆ ತರಬೇಕಿದೆ.
ನಿಯಮ ಪಾಲಿಸದಿದ್ದರೆ ದಂಡ:ಪಾಲಿಕೆಯಲ್ಲಿ ಮಾರ್ಷಲ್ಸ್ಗಳ ನೇಮಕದ ಬಳಿಕ ರಸ್ತೆ ಬದಿ ಕಸ ಎಸೆಯುವವರಿಗೆ ತಕ್ಕ ಮಟ್ಟಿಗೆ ಕಡಿವಾಣ ಬಿದ್ದಿದೆ. ಕಸ ವಿಂಗಡಿಸದವರಿಗೂ ದಂಡ ಬೀಳುತ್ತಿದೆ. ಇನ್ನು ಪಾಲಿಕೆಯದ್ದೇ ಕಾಂಪ್ಯಾಕ್ಟರ್ಗಳು (ತ್ಯಾಜ್ಯ ವಸ್ತು ಅಥವಾ ಜೈವಿಕ ದ್ರವ್ಯರಾಶಿ ಗಾತ್ರವನ್ನು ಸಂಕೋಚನದ ಮೂಲಕ ಕಡಿಮೆ ಮಾಡುವುದು ಈ ಯಂತ್ರದ ಕೆಲಸ) ನಿಯಮಮೀರಿ ಬಲ್ಕ್ ಜನರೇಟರ್ಗಳಿಂದ ಉತ್ಪಾದನೆಯಾಗುವ ಕಸ ತೆಗೆದುಕೊಂಡಿದ್ದಕ್ಕೆ ಆರ್ಆರ್ ನಗರದಲ್ಲಿ ₹,5000 ದಂಡವ ವಿಧಿಸಲಾಗಿತ್ತು. ಹೀಗಾಗಿ, ಎಲ್ಲೂ ಕಸ ಬೀಳದಂತೆ ದಂಡ ಹಾಕುವ ಮೂಲಕ ಮಾರ್ಷಲ್ಗಳು ನಗರದ ಸ್ವಚ್ಛತೆಗೆ ಪ್ರಮುಖ ಪಾತ್ರವಹಿಸಿದ್ದಾರೆ.
ಹಸಿ ತ್ಯಾಜ್ಯ ಟೆಂಡರ್ ಅನುಷ್ಠಾನ ವಿಳಂಬ:ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಪಾಲಿಕೆ ಆರಂಭಿಸಿದ ಪ್ರತ್ಯೇಕ ಹಸಿ ಕಸದ ಟೆಂಡರ್ ಇನ್ನೂ ಎಲ್ಲಾ ವಾರ್ಡ್ಗಳಲ್ಲಿ ಜಾರಿಗೊಂಡಿಲ್ಲ. 198 ವಾರ್ಡ್ಗಳ ಪೈಕಿ 38ರಲ್ಲಿ ಮಾತ್ರ ಅನುಷ್ಠಾನಗೊಂಡಿದೆ. 79 ವಾರ್ಡ್ಗಳಲ್ಲಿ ಅನುಷ್ಠಾನಕ್ಕೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದರೂ ಇನ್ನೂ ಕೆಲಸ ಆರಂಭಿಸಿಲ್ಲ. ಟೆಂಡರ್ ಅನುಷ್ಠಾನಗೊಂಡಿರುವ ಕಡೆ ಗುತ್ತಿಗೆದಾರರು ನಿಯಮಗಳನ್ನು ಪಾಲಿಸುತ್ತಿಲ್ಲ.
ಕಳಪೆ ಕೆಲಸ ಮಾಡಿದರೆ ಟೆಂಡರ್ ರದ್ದುಪಡಿಸಿ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನೂ ಬಿಬಿಎಂಪಿ ನೀಡಿದೆ. ಇನ್ನು 30 ವಾರ್ಡ್ಗಳಲ್ಲಿ ಕಸ ನಿರ್ವಹಣೆ ಮಾಡುತ್ತಿದ್ದ ಎಂಎಸ್ಜಿಪಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ನಲ್ಲಿ ಪಾಲಿಕೆ ಪರ ತೀರ್ಪು ಬಂದಿದ್ದು, ಆ ಮೂವತ್ತು ವಾರ್ಡ್ಗಳಿಗೂ ಪಾಲಿಕೆ ಗುತ್ತಿಗೆದಾರರನ್ನು ಆಯ್ಕೆ ಮಾಡಲಿದೆ. ಹೊಸ ಟೆಂಡರ್ ಜಾರಿಯಾಗಿರುವ ವಾರ್ಡ್ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಹೆಚ್ಚಿದ್ದು, ಘನ ತ್ಯಾಜ್ಯಕ್ಕೆ ಪ್ರತ್ಯೇಕವಾದ ಕಮಾಂಡ್ ಸೆಂಟರ್ ಇನ್ನಷ್ಟೇ ಆರಂಭವಾಗಬೇಕಿದೆ.
ಬೀದಿ ಗುಡಿಸುವ ಕಾರ್ಯಕ್ಕೆ ವಾರ್ಷಿಕವಾಗಿ ತಗುಲುತ್ತಿರುವ ವೆಚ್ಚ ₹380 ಕೋಟಿ
ಕಸ ಸಂಗ್ರಹಣೆ, ಸಾಗಾಣಿಕೆಗೆ ₹400 ಕೋಟಿ, ಘಟಕಗಳ ನಿರ್ವಹಣೆಗೆ ₹50 ಕೋಟಿ ಸೇರಿ ಒಟ್ಟು ₹900 ಕೋಟಿ ವಾರ್ಷಿಕ ವೆಚ್ಚ (ಕೋವಿಡ್ ಹಿನ್ನೆಲೆ ಗುತ್ತಿಗೆದಾರರಿಗೆ ನೀಡುವ ಬಿಲ್ಗಳನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ)
26 ಕಸ ಗುಡಿಸುವ ಯಂತ್ರಗಳ ವೆಚ್ಚವನ್ನು ರಸ್ತೆ ಮೂಲಭೂತ ಸೌಕರ್ಯ ವಿಭಾಗದಿಂದ ನೋಡಿಕೊಳ್ಳಲಾಗುತ್ತಿದೆ
ನಗರದಲ್ಲಿರುವ ಪೌರ ಕಾರ್ಮಿಕರ ಸಂಖ್ಯೆ 18,500
ವಾಹನಗಳು: ಪ್ರತಿ ಸಾವಿರ ಮನೆಗೆ ಒಂದು ಆಟೋ ಟಿಪ್ಪರ್ ಹಾಗೂ 200 ಮನೆಗೆ ಒಂದು ಪುಶ್ ಕಾರ್ಟ್ ವ್ಯವಸ್ಥೆ
ಒಣ ಕಸ ಸಂಗ್ರಹಕ್ಕೆ ಹಾಗೂ ಹೆಚ್ಚುವರಿಯಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರ ಖರೀದಿಗೆ ಸಜ್ಜು
ಗಾರ್ಬೇಜ್ ವಲ್ನರೇಬಲ್ ಪಾಯಿಂಟ್ ಪರಿಚಯ:350 ಬ್ಲಾಕ್ಸ್ಪಾಟ್ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದೇವೆ. ಇನ್ನೂ 1200 ಬ್ಲಾಕ್ಸ್ಪಾಟ್ಗಳಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಗಾರ್ಬೇಜ್ ಸ್ಪಾಟ್ ಗಳಿರುವ ಸ್ಥಳಗಳನ್ನು ಮ್ಯಾಪಿಂಗ್ ಮಾಡಲು ಗಾರ್ಬೇಜ್ ವಲ್ನರೇಬಲ್ ಪಾಯಿಂಟ್ (ಸ್ಥಳೀಯ ನಿವಾಸಿಗಳು ಅಥವಾ ದಾರಿಹೋಕರು ಕಸವನ್ನು ಬೀಳಿಸುವ ಪ್ರದೇಶಗಳನ್ನು ಕಸ ದುರ್ಬಲ ಬಿಂದು ಎನ್ನಲಾಗುತ್ತದೆ) ಆ್ಯಪ್ ಅನ್ನು ಪಾಲಿಕೆ ಪರಿಚಯಿಸುತ್ತಿದೆ. ಮಾರ್ಷಲ್ಗಳು ಇದನ್ನು ಬಳಸಲಿದ್ದಾರೆ. ಇದರಿಂದ ಎಲ್ಲಾ ಬ್ಲಾಕ್ ಸ್ಪಾಟ್ಗಳ ತೆರವಿಗೆ ಮುಂದಾಗಿದ್ದೇವೆ ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಶುಲ್ಕ ಸಂಗ್ರಹ:ಬಿಬಿಎಂಪಿಯ ಕಸ ನಿರ್ವಹಣೆ ವೆಚ್ಚ ಹಾಗೂ ಜನರಿಂದ ಸಂಗ್ರಹಿಸುವ ತೆರಿಗೆಗೆ ಸರಿದೂಗಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ, ಕಸ ನಿರ್ವಹಣೆ ಶುಲ್ಕ ವಸೂಲಿಗೆ ಪಾಲಿಕೆ ಮುಂದಾಗಿದೆ. ಎಲ್ಲಾ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು ಇನ್ಮುಂದೆ ಶುಲ್ಕ ಸಂಗ್ರಹಿಸಲಿದೆ. ಆದರೆ ಶುಲ್ಕ ಸಂಗ್ರಹಿಸುವ ವಿಧಾನದ ಬಗ್ಗೆ ಚರ್ಚೆ ನಡೆಯುತ್ತಿದೆ.