ಬೆಂಗಳೂರು :ಬರ, ಪ್ರವಾಹ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಎದುರಿಸಲು 2021-22ನೇ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ಯೋಜನೆಯ ಕರಡು ಪ್ರತಿಯನ್ನು ಸಿದ್ಧಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತು ಕಾನೂನು ಸೇವಾ ಪ್ರಾಧಿಕಾರ ಹಾಗೂ ತುಮಕೂರು ಜಿಲ್ಲೆಯ ಎ. ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ಹಾಗೂ ನ್ಯಾ. ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಬರ, ಪ್ರವಾಹ, ಸಾಂಕ್ರಾಮಿಕ ಕಾಯಿಲೆಗಳು ಸೇರಿದಂತೆ ಪ್ರಕೃತಿ ವಿಕೋಪಗಳನ್ನು ಎದುರಿಸಲು 2021-22ನೇ ಸಾಲಿನ 'ರಾಜ್ಯ ವಿಪತ್ತು ನಿರ್ವಹಣಾ ಯೋಜನೆ'ಯ ಕರಡು ಸಿದ್ಧವಾಗಿದೆ. ಕೋವಿಡ್ ನಿರ್ವಹಣೆಯ ಅಂಶವನ್ನೂ ಇದರಲ್ಲಿ ಸೇರಿಸಲಾಗಿದೆ.
ಕರಡು ಯೋಜನೆಯನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಮುಂದೆ ಮಂಡಿಸಿ ಅನುಮೋದನೆ ಪಡೆದುಕೊಂಡು ಬಳಿಕ ಪ್ರಾಧಿಕಾರದಿಂದ ಒಪ್ಪಿಗೆ ಪಡೆದು ಅಂತಿಮಗೊಳಿಸಬೇಕಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿದಾರ ಎ. ಮಲ್ಲಿಕಾರ್ಜುನ ಅವರು ವಾದಿಸಿ, ರಾಜ್ಯದ ಯಾವ ಜಿಲ್ಲೆಯಲ್ಲಿಯೂ 'ಜಿಲ್ಲಾ ವಿಪತ್ತು ಸ್ಪಂದನಾ ನಿಧಿ' (ಡಿಡಿಆರ್‌ಎಫ್) ಪ್ರತ್ಯೇಕವಾಗಿ ಸ್ಥಾಪಿಸಿ ಹಣ ಇರಿಸಿಲ್ಲ. ರಾಜ್ಯಮಟ್ಟದ ವಿಪತ್ತು ಸ್ಪಂದನಾ ನಿಧಿ (ಎಸ್‌ಡಿಆರ್‌ಎಫ್) ಹಣವನ್ನು ಡಿಡಿಆರ್‌ಎಫ್‌ಗೆ ವರ್ಗಾಯಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠ, 2021-22ನೇ ಸಾಲಿನ ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ಯೋಜನೆ ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜಿಲ್ಲಾ ವಿಪತ್ತು ಸ್ಪಂದನಾ ನಿಧಿ ಅಡಿ ಯಾವ ಜಿಲ್ಲೆಯಲ್ಲಿ ಎಷ್ಟು ಹಣ ಇದೆ ಎಂಬ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.