ಕರ್ನಾಟಕ

karnataka

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗೆ ಪ್ರತಿ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಕಮಿಟಿ: ಪ್ರಭು ಚವ್ಹಾಣ್

By

Published : Feb 23, 2022, 10:37 AM IST

ಅಕ್ರಮ ಕಸಾಯಿಖಾನೆಗಳ ಮೂಲಕ ನಡೆಯುವ ಜಾನುವಾರುಗಳ ಅಕ್ರಮ ಸಾಗಾಟ ಮತ್ತು ಶೇಖರಣೆಯನ್ನು ತಡೆಗಟ್ಟುವ ಜೊತೆಗೆ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಯಲು ವಿಶೇಷ ಕಾರ್ಯ ಪಡೆಯನ್ನು ರಚಿಸುವ ಬಗ್ಗೆ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.

special-task-force-to-take-action-against-animal-crueality
ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ಅಕ್ರಮ‌ ಕಸಾಯಿಖಾನೆಗಳನ್ನು ತೆರೆದು ಗೋವುಗಳ ಮಾಂಸ ಸಾಗಾಣಿಕೆ ಮತ್ತು ಶೇಖರಣೆ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವ ಮೂಲಕ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟಲು ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಮತ್ತು ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯರುಗಳನ್ನೊಳಗೊಂಡ ವಿಶೇಷ ಕಾರ್ಯಪಡೆ (ಟಾಸ್ಕ್ ಪೋರ್ಸ್ ಕಮಿಟಿ) ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು.

ವಿಕಾಸಸೌಧದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳನ್ನು ತೆರೆದು ಪ್ರಾಣಿಗಳನ್ನು ವಧೆ ಮಾಡುತ್ತಿರುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಟಾಸ್ಕ್ ಫೋರ್ಸ್ ಕಮಿಟಿ ಸ್ಥಾಪಿಸಲಾಗುವುದು. ಇದರಿಂದ ಪ್ರಾಣಿಗಳ ಮೇಲಿನ ಕ್ರೌರ್ಯಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಮೂಕ ಪ್ರಾಣಿಗಳನ್ನು ರಕ್ಷಣೆ ಜೊತೆಗೆ ಕಸಾಯಿಖಾನೆಗೆ ಸಾಗಿಸುವುದನ್ನು ತಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಅನಧಿಕೃತವಾಗಿ ಜಾನುವಾರುಗಳ ಸಾಗಾಣಿಕೆ ಮತ್ತು ಶೇಖರಣೆ ಪ್ರಕರಣಗಳಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಗೆ ಪ್ರತಿ ವಾದಿಯನ್ನಾಗಿ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ವಕೀಲರುಗಳನ್ನು ಪ್ರತಿ ಜಿಲ್ಲೆಯಲ್ಲೂ ನೇಮಕ ಮಾಡಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಜಿಲ್ಲಾ ಪ್ರಾಣಿ ದಯಾ ಸಂಘದ ಸಮಿತಿಗಳು ರಚನೆಯಾಗಿಲ್ಲ. ಅವುಗಳನ್ನು ಪುನರ್ ರಚನೆ ಮಾಡಿ ಹೊಸ ಸದಸ್ಯರುಗಳನ್ನು ನೇಮಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು‌.

ಈಗಾಗಲೇ ರಾಜ್ಯದ 25 ಜಿಲ್ಲೆಗಳಲ್ಲಿ ಜಿಲ್ಲೆಗೊಂದು ಸರ್ಕಾರಿ ಗೋಶಾಲೆಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಗೋಶಾಲೆಗೆ ಜಾಗ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪ್ರಾಣಿ ಆರೈಕೆ ಮತ್ತು ಪ್ರಾಣಿ ಕಲ್ಯಾಣದ ಬಗ್ಗೆ ಅರಿವು ಮೂಡಿಸಲು ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಶಾಲೆಗಳಲ್ಲೂ ಪ್ರಾಣಿ ಆರೈಕೆ ಮತ್ತು ಕಲ್ಯಾಣ ಕ್ಲಬ್ ಸ್ಥಾಪಿಸಿ, ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಚಿವರು ಹೇಳಿದರು.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಬೀದಿ ನಾಯಿ ಮೇಲೆ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದಲ್ಲಿ ಬಂಧಿತರಾದವರು ಕಡಿಮೆ ದಂಡ ಪಾವತಿಸಿ, ಬಿಡುಗಡೆಯಾಗಿದ್ದಾರೆ. ಇಂತಹ ಪ್ರಕರಣಗಳು ಮರುಕಳುಹಿಸುವುದನ್ನು ಹಾಗೂ ಪ್ರಾಣಿ ಕ್ರೌರ್ಯ ತಡೆಗಟ್ಟಲು ಇಂತಹ ಪ್ರಕರಣಗಳಲ್ಲಿ ಬಂಧಿತರಾದವರಿಗೆ 50 ಸಾವಿರ ರೂ. ದಂಡ‌ ಹಾಗೂ 2 ವರ್ಷ ಜೈಲು ಶಿಕ್ಷೆ ವಿಧಿಸುವ ಕುರಿತು ಸದಸ್ಯರಿಂದ ಕೇಳಿ ಬಂದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಸಚಿವ ಪ್ರಭು ಚವ್ಹಾಣ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಾಮನಿರ್ದೇಶಿತ ಸದಸ್ಯರುಗಳನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹೀಮ್, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ನಿರ್ದೇಶಕ ಮಂಜುನಾಥ್ ಪಾಳೆಗಾರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ :ಮಂಡ್ಯದ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

ABOUT THE AUTHOR

...view details