ಕರ್ನಾಟಕ

karnataka

ETV Bharat / city

ಬಿಬಿಎಂಪಿ ಚುನಾವಣೆ: ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿರುವ ಸಿಎಂ

15 ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಈ ವಿಶೇಷ ಪ್ಯಾಕೇಜ್ ಘೋಷಣೆಯಾದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

Minister R. Ashok
ಸಚಿವ ಆರ್.ಅಶೋಕ್ ಮಾಧ್ಯಮಗೋಷ್ಠಿ

By

Published : Sep 30, 2021, 7:52 PM IST

ಬೆಂಗಳೂರು: ಬೆಂಗಳೂರಿಗೆ ವಿಶೇಷ ಪ್ಯಾಕೇಜ್​​ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಲಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಈ ವಿಚಾರ ಬಹಿರಂಗಪಡಿಸಿದ ಅವರು, 15 ದಿನಗಳಲ್ಲಿ ಮುಖ್ಯಮಂತ್ರಿಗಳು ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ. ಈ ವಿಶೇಷ ಪ್ಯಾಕೇಜ್ ಘೋಷಣೆಯಾದರೆ ಬೆಂಗಳೂರು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.

ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆ: ಸಚಿವ ಆರ್.ಅಶೋಕ್

6,000 ಕೋಟಿ ರೂ. ಪ್ಯಾಕೇಜ್?:

ಬೆಂಗಳೂರಿಗೆ 6,000 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆಯಾಗಲಿದೆ ಎನ್ನಲಾಗಿದೆ.‌ ಈ ವಿಶೇಷ ಪ್ಯಾಕೇಜ್ ಮೂಲಕ ಬೆಂಗಳೂರಿನ ಕಾಮಗಾರಿಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜತೆಗೆ ಹೊಸ ಮೇಲ್ಸೇತುವೆ, ಫೆರಿಪರೆಲ್ ರಸ್ತೆ ನಿರ್ಮಾಣ, ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆ ಪ್ಯಾಕೇಜ್?:

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಬಹುತೇಕ ಫೆಬ್ರವರಿ- ಮಾರ್ಚ್‌ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಸರ್ಕಾರ ಬೆಂಗಳೂರು ಕೇಂದ್ರೀಕರಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಬೆಂಗಳೂರಿಗರ ಮನವೊಲಿಸಲು ಮುಂದಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಬಿಎಸ್​​​ವೈಯಿಂದ ಬೆಂಗಳೂರು ಮಿಷನ್, ಬೊಮ್ಮಾಯಿಂದ ವಿಶೇಷ ಪ್ಯಾಕೇಜ್:

ಕಳೆದ ಡಿಸೆಂಬರ್​​ನಲ್ಲಿ ಅಂದಿನ ಸಿಎಂ ಬಿ.ಎಸ್​​ ಯಡಿಯೂರಪ್ಪ 'ಬೆಂಗಳೂರು ಮಿಷನ್ 2022'ಗೆ ಚಾಲನೆ ನೀಡಿದ್ದರು. ಬೆಂಗಳೂರಿನ ಜನರಿಗೆ ಮೂಲಭೂತ ಸೌಕರ್ಯ, ಪರಿಸರ, ಸಾರಿಗೆ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರು ಮಿಷನ್ 2022ಗೆ ಚಾಲನೆ ನೀಡಲಾಗಿತ್ತು.

ಬೆಂಗಳೂರು ಮಿಷನ್ 2022ರಲ್ಲಿ ಸಾರಿಗೆ, ಸ್ವಚ್ಛ ಬೆಂಗಳೂರು, ಗ್ರೀನ್ ಬೆಂಗಳೂರು ಹಾಗೂ ಡಿಜಿಟಲ್ ಸೇವೆ ಪ್ರಮುಖ ಆದ್ಯತಾ ಕ್ಷೇತ್ರಗಳಾಗಿವೆ. ಮುಂದಿನ ಎರಡು ವರ್ಷಗಳಲ್ಲಿ ಬೆಂಗಳೂರು ಮಿಷನ್ ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಲಾಗಿತ್ತು.

ಇದೀಗ ಬೊಮ್ಮಾಯಿ ಸರ್ಕಾರ ಬೆಂಗಳೂರು ಕೇಂದ್ರೀಕರಿಸಿ 'ವಿಶೇಷ ಪ್ಯಾಕೇಜ್' ಘೋಷಣೆ ಮಾಡುತ್ತಿದ್ದಾರೆ. ಹಿಂದಿನ ಬಿಎಸ್​​ವೈ ಸರ್ಕಾರ ಡಿಸೆಂಬ​​ರ್​​ನಲ್ಲಿ ಬೆಂಗಳೂರು ಅಭಿವೃದ್ಧಿ ಕೇಂದ್ರೀಕರಿಸಿ ಬೆಂಗಳೂರು ‌ಮಿಷನ್ 2022 ಯೋಜನೆಗೆ ಚಾಲನೆ ನೀಡಿದ್ದಾರೆ. ಇದೀಗ ಬೊಮ್ಮಾಯಿ ಸರ್ಕಾರ ಬೆಂಗಳೂರು ಅಭಿವೃದ್ಧಿ ಕೇಂದ್ರೀಕರಿಸಿ ವಿಶೇಷ ಪ್ಯಾಕೇಜ್ ಘೋಷಿಸುತ್ತಿರುವ ಔಚಿತ್ಯ ಏನು ಎಂಬ ಪ್ರಶ್ನೆ ಮೂಡುತ್ತದೆ.

ಈಗಾಗಲೇ ಕೋವಿಡ್​​​ನಿಂದ ಸರ್ಕಾರ ಭಾರೀ ಆದಾಯ ಕೊರತೆ ಎದುರಿಸುತ್ತಿದೆ. ಇಂತಹ ಆರ್ಥಿಕ ಸಂಕಷ್ಟದಲ್ಲಿ ಬೆಂಗಳೂರಿಗೆ ವಿಶೇಷ ಪ್ಯಾಕೇಜ್ ಘೋಷಣೆಯ ಅನಿವಾರ್ಯತೆ ಏನು? ಎಂಬ ಅನುಮಾನ ಮೂಡಿದೆ. ಇದರ ಹಿಂದೆ ಬಿಬಿಎಂಪಿ ಚುನಾವಣೆ ಇದೆ ಎಂಬುದು ಸ್ಪಷ್ಟವಾದಂತಿದೆ.

ಬೆಂಗಳೂರು ಮಿಷನ್ ಆದ್ಯತೆ ಏನು?:

  • 12 ಅತಿ ಹೆಚ್ಚು ಟ್ರಾಫಿಕ್ ಇರುವ 190 ಕಿ.ಮೀ. ಉದ್ದನೆಯ ರಸ್ತೆ ಅಭಿವೃದ್ಧಿ
  • 25 ಕೆರೆಗಳ ಪುನಶ್ಚೇತನ, 20 ಕೆರೆಗಳ ನೀರಿನ ಗುಣಮಟ್ಟ ನಿಗಾವಣೆ
  • ರಾಜಕಾಲುವೆಗಳ ಸುಂದರೀಕರಣ
  • ತ್ಯಾಜ್ಯ ಸಂಸ್ಕರಣೆ ಮತ್ತು ಜಿರೋ ತ್ಯಾಜ್ಯ ಮನೆಗಳ ಸಂಬಂಧ ಅಧ್ಯಯನ ಕೇಂದ್ರ ರಚನೆ
  • ಉಪನಗರಗಳಲ್ಲಿ 400 ಎಕರೆ ಜಮೀನಿನಲ್ಲಿ ಎರಡು ಮೆಗಾ ಟ್ರೀ ಪಾರ್ಕ್ ನಿರ್ಮಾಣ
  • ಸಾರ್ವಜನಿಕ ಕುಂದು ಕೊರತೆ ಪರಿಹಾರಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ
  • ರಸ್ತೆ ಇತಿಹಾಸ ಹಾಗೂ ನಾಗರೀಕ ಸೇವೆಗಳ ಆನ್ ಲೈನ್ ವ್ಯವಸ್ಥೆ

ABOUT THE AUTHOR

...view details