ಇಕ್ಕಟ್ಟಿನಲ್ಲಿ ಮೈತ್ರಿ ಸರ್ಕಾರ... ಎಲ್ಲರ ಚಿತ್ತ ಸ್ಪೀಕರ್ ಕಚೇರಿಯತ್ತ!
ನಾಳೆ ಸ್ಪೀಕರ್ ವಿಧಾನಸೌಧಕ್ಕೆ ಆಗಮಿಸಲಿದ್ದು, ಶಾಸಕರ ರಾಜೀನಾಮೆ ಪತ್ರ ಪರಿಶೀಲನೆ ನಡೆಯಲಿದೆ. ಜೊತೆಗೆ ರಾಜೀನಾಮೆ ನೀಡಿದ ಅತೃಪ್ತ ಕೈ ಶಾಸಕರ ವಿರುದ್ಧ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
speaker ramesh kumar
ಬೆಂಗಳೂರು:13 ಮಂದಿ ಅತೃಪ್ತ ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆ ಪ್ರಕ್ರಿಯೆ ನಾಳೆಯಿಂದ ನಡೆಯುವ ಸಾಧ್ಯತೆ ಇದೆ.
ನಾಳೆ ಸ್ಪೀಕರ್ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದ್ದು, ರಾಜೀನಾಮೆ ನೀಡಿದ ಅತೃಪ್ತ ಶಾಸಕರ ರಾಜೀನಾಮೆ ಪತ್ರ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಸ್ವತಃ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ಬೆಂಗಳೂರಿಗೆ ವಾಪಸಾಗಿ ರಾಜೀನಾಮೆ ಪತ್ರ ಪರಿಶೀಲನೆ ನಡೆಸುತ್ತೇನೆ ಎಂದು ತಿಳಿಸಿದ್ದು, ಅದರಂತೆ ನಾಳೆ ಸ್ಪೀಕರ್ ಶಾಸಕರ ರಾಜೀನಾಮೆ ಪತ್ರ ಪರಿಶೀಲನೆ ನಡೆಸಲಿದ್ದಾರೆ.
ಕಾಂಗ್ರೆಸ್ನಿಂದ ಸ್ಪೀಕರ್ಗೆ ದೂರು ನೀಡುವ ಸಾಧ್ಯತೆ:ರಾಜೀನಾಮೆ ನೀಡಿದ ಅತೃಪ್ತ ಕೈ ಶಾಸಕರ ವಿರುದ್ಧ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ತಮಿಳುನಾಡು ಪ್ರಕರಣ ಆಧರಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ. ಆ ಮೂಲಕ ಅತೃಪ್ತ ಕೈ ಶಾಸಕರಿಗೆ ಕಾನೂನು ಮೂಲಕ ಕಟ್ಟಿಹಾಕಲು ನಿರ್ಧರಿಸಿದ್ದಾರೆ. ಈ ಸಂಬಂಧ ಕೈ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಸ್ಪೀಕರ್ ಆಪ್ತ ಕಾರ್ಯದರ್ಶಿಗೆ ದೂರು ನೀಡಲು ಮುಂದಾಗಿದ್ದಾರೆ.
ಸ್ಪೀಕರ್ ಕಚೇರಿಗೆ 30ಕ್ಕೂ ಹೆಚ್ಚು ದೂರುಗಳು ಸಲ್ಲಿಕೆ?:ಇತ್ತ ರಾಜೀನಾಮೆ ಪತ್ರ ನೀಡಿದ ಅತೃಪ್ತರ ವಿರುದ್ಧ ವಿವಿಧ ಸಂಘಟನೆಗಳು, ಕ್ಷೇತ್ರಗಳ ಜನರು ದೂರನ್ನು ನೀಡಿದ್ದಾರೆ ಎನ್ನಲಾಗಿದೆ. ಶಾಸಕರ ರಾಜೀನಾಮೆ ಅಂಗೀಕರಿಸದಂತೆ ಮನವಿ ಮಾಡಿದ್ದು, ರಾಜೀನಾಮೆ ಅಂಗೀಕರಿಸುವ ಮೊದಲು ನಮ್ಮ ವಾದ ಆಲಿಸಬೇಕು. ಅವರು ಆಮಿಷಕ್ಕೊಳಗಾಗಿ ರಾಜೀನಾಮೆ ನೀಡಿದ್ದಾರೆ. ಕೂಲಂಕುಶವಾಗಿ ಶಾಸಕರ ವಿಚಾರಣೆ ನಡೆಸಬೇಕು. ನಮ್ಮ ಅಹವಾಲು ಆಲಿಸುವಂತೆ ಮನವಿ ಮಾಡಿದ್ದಾರೆ. ಇತ್ತ ಕೆಪಿಸಿಸಿ ಕಾನೂನು ಘಟಕ, ಕಾಂಗ್ರೆಸ್ ಯುವ ಘಟಕ, ಹುಣಸೂರಿನ ವಿವಿಧ ಸಂಘಟನೆಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರಿಂದ ಮನವಿ ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.