ಉತ್ತರ ಕನ್ನಡ/ಬೆಂಗಳೂರು/ ಮೈಸೂರು: ನಾಡಿನಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿದ್ದು, ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕಾರವಾರ: ದಕ್ಷಿಣ ಕಾಶಿ ಗೋಕರ್ಣದಲ್ಲಿ ಮಹಾ ಶಿವರಾತ್ರಿ ಸಂಭ್ರಮ ಜೋರಾಗಿದ್ದು, ಆತ್ಮಲಿಂಗದ ದರ್ಶನಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಶಿವರಾತ್ರಿಯಂದು ಆತ್ಮಲಿಂಗ ಮುಟ್ಟಿದರೆ ಕಷ್ಟಗಳು ಬಗೆಹರಿದು ಬೇಡಿಕೆ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಈ ಹಿನ್ನಲೆ ಭಕ್ತರು ಬೆಳಗ್ಗೆ 2 ಗಂಟೆಯಿಂದಲೇ ಮಹಾಬಲೇಶ್ವರ ದೇವಸ್ಥಾನದ ಎದುರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದಿಂದ ಮಾತ್ರವಲ್ಲದೇ ನಾನಾ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆತ್ಮಲಿಂಗದ ದರ್ಶನಕ್ಕಾಗಿ ಆಗಮಿಸಿದ್ದಾರೆ. ಭಕ್ತರು ಆತ್ಮಲಿಂಗಕ್ಕೆ ಹಾಲು, ಬಿಲ್ವಪತ್ರೆ, ನೀರನ್ನು ಹಾಕಿ ಪೂಜಾ ಕಾರ್ಯವನ್ನು ಮಾಡುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ಹಿನ್ನೆಲೆಯಲ್ಲಿ ಕಿಲೋ ಮೀಟರ್‌ಗಟ್ಟಲೇ ಭಕ್ತರ ಸಾಲು ಇದ್ದು, ದೇವರ ದರ್ಶನಕ್ಕೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ತಾಲೂಕು ಆಡಳಿತ ಕ್ರಮ ಕೈಗೊಂಡಿದ್ದು, ರಾತ್ರಿವರೆಗೆ ಸಹಸ್ರಾರು ಭಕ್ತರು ಆತ್ಮಲಿಂಗ ದರ್ಶನವನ್ನು ಪಡೆಯಲಿದ್ದಾರೆ
ಬೆಂಗಳೂರು: ನಗರದ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಮುಂಜಾನೆಯಿಂದಲೇ ಕಿಲೋ ಮೀಟರ್ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷದಿಂದ ಹಬ್ಬದ ಸಂಭ್ರಮವೆಲ್ಲವೂ ಮಂಕಾಗಿದ್ದವು. ಸದ್ಯ ಕೊರೊನಾ ಪ್ರಕರಣಗಳು ಇಳಿಕೆ ಕಂಡಿದ್ದು, ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಹೀಗಾಗಿ ನಾಡಿನೆಲ್ಲೆಡೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆಯುತ್ತಿದೆ.
ಬೆಳಗ್ಗೆ 6 ಗಂಟೆಯಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವ ಪತ್ರೆ ಅರ್ಪಣೆ ಸೇರಿದಂತೆ ನಾನಾ ಅಭಿಷೇಕಗಳನ್ನು ನೆರವೇರಿಸಲಾಗುತ್ತಿದೆ. ಇಡೀ ದಿನ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದ್ದು, ಜಾಗರಣೆ ಹಿನ್ನೆಲೆ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜೆ ಜರುಗಲಿದೆ. ಇಂದು ರಾತ್ರಿ ಜಾಗರಣೆ, ಉಪವಾಸ ಮಾಡಿದರೆ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ ಇದ್ದು, ಎಲ್ಲೆಡೆ ಭಕ್ತರು ಶಿವ ನಾಮ ಸ್ಮರಣೆಯಲ್ಲಿ ತೊಡಗಿದ್ದಾರೆ.