ಬೆಂಗಳೂರು: ಮಾನವೀಯ ಗುಣ ಹಾಗೂ ಪಕ್ಷಪಾತವಿಲ್ಲದ ನ್ಯಾಯನಿಷ್ಠುರತೆಯನ್ನು ಸನಾತನ ಧರ್ಮ ಬೋಧಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉತ್ತರಾಧಿಮಠದ ಜಯತೀರ್ಥ ವಿದ್ಯಾಪೀಠದಲ್ಲಿ ನಡೆಯುತ್ತಿರುವ ಶ್ರೀಮನ್ ನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮ ಉಳಿದರೆ ಮಾನವೀಯತೆ ಉಳಿಯುತ್ತದೆ. ವೇದಗಳಿಂದ ಸತ್ಯ ಹಾಗೂ ನ್ಯಾಯದ ಮಾರ್ಗ ಜನರಿಗೆ ಸಿಗುತ್ತದೆ ಎಂದರು.
ವೇದಗಳ ಭಾವಾರ್ಥಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಮೂಲಕ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು. ಪ್ರತಿಯೊಬ್ಬ ಮನುಷ್ಯನಲ್ಲಿರುವ ಗೊಂದಲಗಳು ನಿವಾರಣೆಯಾಗಿ ಸ್ಪಷ್ಟತೆ ಮೂಡುತ್ತದೆ. ಆಧುನಿಕ ಜಗತ್ತಿನ ಸವಾಲುಗಳಿಗೆ ಉತ್ತರಿಸುವ ರೀತಿಯಲ್ಲಿ ವೇದಗಳ ಅರ್ಥವನ್ನು ಸರಳೀಕರಿಸಿ ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದು ಸಿಎಂ ಕರೆ ನೀಡಿದರು.