ಬೆಂಗಳೂರು: 2004ರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ನೇಮಕವಾಗಿರುವ ಸಕ್ಷಮ ಪ್ರಾಧಿಕಾರ ಇಂಜಾಜ್ ಇಂಟರ್ ನ್ಯಾಷನಲ್ ಕಂಪನಿ (ಐಮಾನಿಟರಿ- ಐಎಂಎ) ಠೇವಣಿದಾರರು ಮತ್ತು ಸುರಕ್ಷಿತ ಸಾಲಗಾರರಿಂದ ಕ್ಲೈಮ್ಗಳನ್ನು ಕರೆಯಲು ಅರ್ಜಿ ಆಹ್ವಾನಿಸಿದೆ.
ಕ್ಲೈಮ್ ಅರ್ಜಿಗಳು ಮಾರ್ಚ್ 15 ರಿಂದ ಪ್ರಾರಂಭವಾಗಲಿದೆ. ಈ ದಿನಾಂಕದಿಂದ 30 ದಿನಗಳ ಒಳಗಾಗಿ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಸಲ್ಲಿಸಿದ ಕ್ಲೈಮ್ಗಳನ್ನು ಮಾತ್ರ ಸ್ವೀಕರಿಸಲಾಗುವುದು. ಠೇವಣಿದಾರರು ಸ್ವತಃ ಅಥವಾ ಸರ್ಕಾರಿ ಸೇವಾ ಕಿಯೋಸ್ಕ್, ಬೆಂಗಳೂರು-ಒನ್/ಕರ್ನಾಟಕ ಒನ್/ನಾಗರೀಕ ಸೇವಾ ಕೇಂದ್ರಗಳ ಆಪರೇಟರ್ಗಳ ನೆರವಿನಿಂದ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರ ತಿಳಿಸಿದೆ.
ಆನ್ ಲೈನ್ ಕ್ಲೈಮ್ ಅರ್ಜಿಯನ್ನು ಸಲ್ಲಿಸಲು ಕ್ಲೈಮುದಾರರು ತಮ್ಮ ಗುರುತನ್ನು ದೃಢೀಕರಿಸುವುದರ ಜೊತೆಗೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಒಟಿಪಿ ಅಥವಾ ಬಯೋ ಮೆಟ್ರಿಕ್ ಆಧಾರಿತ ದೃಢೀಕರಣ ಮಾಡಿಕೊಳ್ಳಬೇಕು. ಆಯಾ ಠೇವಣಿ ಯೋಜನೆಗೆ ಲಿಂಕ್ ಮಾಡಲಾದ ಕ್ಲೈಮುದಾರರ ಖಾತೆಯಿಂದ ಸಕ್ಷಮ ಪ್ರಾಧಿಕಾರದ ಬ್ಯಾಂಕ್ ಖಾತೆಗೆ ರೂ.1/ಎನ್.ಈ.ಎಫ್.ಟಿ/ಆರ್.ಟಿ.ಜಿ.ಎಸ್ ಮೂಲಕ ವರ್ಗಾವಣೆ ಮಾಡಿದಾಗ ಲಭ್ಯವಾಗುವ ವಹಿವಾಟು ಸಂಖ್ಯೆ (ಯುಟಿಆರ್) ಮೂಲಕ ಮತ್ತು ಅರ್ಜಿದಾರರು ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮುಂತಾದ ದಾಖಲೆಗಳೊಂದಿಗೆ ಸಕ್ಷಮ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಭೇಟಿ ನೀಡಬಹುದಾಗಿದೆ ಎಂದಿದೆ.
ವೆಬ್ಸೈಟ್ ಹೆಲ್ಪ್ ಡೆಸ್ಕ್ ವಿವರಗಳು ಶೀಘ್ರದಲ್ಲಿ ಪ್ರಕಟ: ಸಕ್ಷಮ ಪ್ರಾಧಿಕಾರ ಠೇವಣಿದಾರರಿಗೆ ಪೋಸ್ಟ್ ಮತ್ತು ಎಸ್ಎಂಎಸ್ ಅಥವಾ ರೆಕಾರ್ಡ್ ಮಾಡಿದ ಪೂರ್ವಮುದ್ರಿತ ಕರೆಗಳ ಮೂಲಕ ಲಭ್ಯವಿರುವ ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳಿಗೆ ಸೂಚನೆಗಳನ್ನು ಕಳುಹಿಸುತ್ತದೆ. ವೆಬ್ ಸೈಟ್ ಮತ್ತು ಹೆಲ್ಪ್ ಡೆಸ್ಕ್ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಸಕ್ಷಮ ಪ್ರಾಧಿಕಾರದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.