ಕರ್ನಾಟಕ

karnataka

ETV Bharat / city

ಕೆಎಂಎಫ್ ಅಧ್ಯಕ್ಷ ಗಾದಿಯತ್ತ ಕಣ್ಣು... ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್​ ಮಾಡಿದ್ರಾ ರೇವಣ್ಣ? - ಕರ್ನಾಟಕ ರಾಜಕೀಯ ಬೆಳವಣಿಗೆಗಳು

ರಾಜ್ಯದಲ್ಲಿ ಬಿಜೆಪಿ ಆರಂಭಿಸಿದ ರೆಸಾರ್ಟ್​ ರಾಜಕೀಯ ಮತ್ತೆ ಜೆಡಿಎಸ್ ಮೂಲಕ ಗರಿಗೆದರಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ಮಾಜಿ ಸಚಿವ ಹೆಚ್.ಡಿ ರೇವಣ್ಣ ಈ ಬಾರಿ ಕೆಎಂಎಫ್ ಅಧ್ಯಕ್ಷ ಆಗಲೇಬೇಕೆಂದು ಪಣ ತೊಟ್ಟಿದ್ದು, ಕಾಂಗ್ರೆಸ್​ನ ನಾಲ್ವರು ಕೆಎಂಎಫ್ ನಿರ್ದೇಶಕರನ್ನು ಹೈಜಾಕ್ ಮಾಡಿ ರೆಸಾರ್ಟ್​ನಲ್ಲಿಟ್ಟಿದ್ದಾರೆ.

KMF Politics latest news

By

Published : Jul 28, 2019, 1:31 AM IST

Updated : Jul 28, 2019, 1:45 AM IST

ಬೆಂಗಳೂರು: ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರ ಕಳೆದುಕೊಂಡಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಈಗ ಕೆಎಂಎಫ್ ಅಧ್ಯಕ್ಷ ಸ್ಥಾನದ‌ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.

ಶತಾಯಗತಾಯ ಈ ಬಾರಿ ಕೆಎಂಎಫ್ ಅಧ್ಯಕ್ಷರಾಗಲೇಬೇಕೆಂದು ಪಣ ತೊಟ್ಟಿರುವ ರೇವಣ್ಣ ಕಾಂಗ್ರೆಸ್​ಗೆ ಸೇರಿದ ನಾಲ್ವರು ಕೆಎಂಎಫ್ ನಿರ್ದೇಶಕರನ್ನು ಹೈಜಾಕ್ ಮಾಡಿ, ರಹಸ್ಯವಾಗಿ ಹೈದರಾಬಾದ್​ನ ರೆಸಾರ್ಟ್​ನಲ್ಲಿಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ನಾಳೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೆ ಕಾಂಗ್ರೆಸ್​ನವರೇ ಆದ ಹಾಲು ಒಕ್ಕೂಟದ ನಿರ್ದೇಶಕರಾದ ಶಿವಮೊಗ್ಗದ ವೀರಭದ್ರ ಬಾಬು, ಧಾರವಾಡದ ಹೀರೇಗೌಡ, ಉಡುಪಿಯ ಕಾಪು ದಿವಾಕರ ಶೆಟ್ಟಿ, ವಿಜಯಪುರದ ಶ್ರೀಶೈಲ ಅವರನ್ನು ಹೈದರಾಬಾದ್​ನ ರೆಸಾರ್ಟ್​ನಲ್ಲಿ ಯಾರ ಕೈಗೂ ಸಿಗದಂತೆ ಇರಿಸಲಾಗಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರನ್ನು ನೇಮಿಸಲು ಮೈತ್ರಿ ಸರ್ಕಾರವಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಪ್ಪಂದವಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ರೇವಣ್ಣನವರ ಸಮ್ಮುಖದಲ್ಲಿ ಭೀಮಾನಾಯ್ಕಗೆ ಬೆಂಬಲ ನೀಡುವಂತೆ ಮಾತುಕತೆ ನಡೆಸಿದ್ದರು.

ಮೈತ್ರಿ ಸರ್ಕಾರ ಬಿದ್ದುಹೋದ ಬಳಿಕ ಕೆಎಂಎಫ್ ಅಧ್ಯಕ್ಷ ಗಾದಿಯಾದರೂ ತಮಗೆ ಸಿಗಲಿ ಎಂದು ರೇವಣ್ಣ ತಂತ್ರಗಾರಿಕೆ ಹೆಣೆದಿದ್ದಾರೆ. ಅದರಂತೆ ನಾಲ್ವರು ನಿರ್ದೇಶಕರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಕೆಎಂಎಫ್​ನಲ್ಲಿ ಕಾಂಗ್ರೆಸ್​ನ 9 ಹಾಗೂ ಜೆಡಿಎಸ್​ನ 3 ನಿರ್ದೇಶಕರಿದ್ದಾರೆ. ರೇವಣ್ಣ ಬಚ್ಚಿಟ್ಟಿರುವ ನಾಲ್ವರು ನಿರ್ದೇಶಕರು ಚುನಾವಣೆಯಲ್ಲಿ ಅವರ ಪರ ನಿಂತರೆ ಕಾಂಗ್ರೆಸ್​​ ಶಾಸಕ ಭೀಮಾನಾಯ್ಕ ಸೋಲುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ರೇವಣ್ಣ ಕಾಂಗ್ರೆಸ್ ನಿರ್ದೇಶಕರನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಸನಿಹದಲ್ಲೆ ರೆಸಾರ್ಟ್​ ರಾಜಕಾರಣ ಗರಿಗೆದರಿದ್ದು, ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ.

Last Updated : Jul 28, 2019, 1:45 AM IST

ABOUT THE AUTHOR

...view details