ಬೆಂಗಳೂರು: ರಾಜ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮುಂಗಾರು ಚುರುಕುಗೊಂಡಿರುವ ಕಾರಣ ನದಿಗಳ ನೀರಿನ ಮಟ್ಟದಲ್ಲೂ ಭಾರೀ ಏರಿಕೆಯಾಗಿದೆ. ವಿವಿಧ ಜಿಲ್ಲೆಗಳ ಅಲ್ಲಲ್ಲಿ ಸೇತುವೆಗಳು ಜಲಾವೃತಗೊಂಡಿವೆ. ಕೆಲವೆಡೆ ರಸ್ತೆ, ಸೇತುವೆಗಳು ಕುಸಿತವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿ ಜನರು ಪರದಾಡುತ್ತಿದ್ದಾರೆ.
ಉಕ್ಕಿ ಹರಿಯುತ್ತಿವೆ ನದಿಗಳು..
ಮಲೆನಾಡು, ಕರಾವಳಿ ಭಾಗದಲ್ಲಿರುವ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ ರಾಜ್ಯದ ಪ್ರಮುಖ ಅಣೆಕಟ್ಟೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಕೃಷ್ಣಾ ನದಿಗೆ ಒಳ ಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ. ಆಲಮಟ್ಟಿ ಜಲಾಶಯದ 26 ಗೇಟ್ನಲ್ಲಿ 24 ಗೇಟ್ಗಳ ಮೂಲಕ ನೀರು ಹೊರಬಿಡಲಾಗುತ್ತಿದೆ.
ಇದನ್ನೂ ಓದಿ: ವರುಣನ ಆರ್ಭಟಕ್ಕೆ ಹಲವೆಡೆ ಭೂಕುಸಿತ: ಹಳಿತಪ್ಪಿದ ಮಂಗಳೂರು-ಮುಂಬೈ ರೈಲು..ಪ್ರಯಾಣಿಕರ ಪರದಾಟ!
ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರೀ ಸಾಗರ ಡ್ಯಾಂನ 24 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, ಯಾದಗಿರಿಯ ಬಸವ ಸಾಗರಕ್ಕೆ ನೀರು ಬಿಡಲಾಗುತ್ತಿದೆ. ಡ್ಯಾಂಗೆ 81,202 ಕ್ಯೂಸೆಕ್ ಒಳ ಹರಿವು ಇದೆ. ಹೀಗಾಗಿ 24 ಗೇಟ್ಗಳ ಮೂಲಕ 1,71,428 ಕ್ಯೂಸೆಕ್ ನೀರು ಹೊರ ಹರಿವು ಬಿಡಲಾಗುತ್ತಿದೆ. ಹೊರ ಹರಿವು ಹೆಚ್ಚಳದಿಂದಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.
ಕಳೆದೆರಡು ದಿನಗಳಲ್ಲಿ ವರುಣನ ಅಬ್ಬರ; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ ಇದನ್ನೂ ಓದಿ: ಆಲಮಟ್ಟಿ ಡ್ಯಾಂನಿಂದ 1.70 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ..ಮಹಾರಾಷ್ಟ್ರದ ಗಡಿಯಲ್ಲಿ ಹೆಚ್ಚಿದ ಆತಂಕ!
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಅಪಾರ ಪ್ರಮಾಣದ ನೀರು ಹೊರ ಹರಿಸಲಾಗ್ತಿದೆ. ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಶಿರಸಿ ತಾಲೂಕಿನಲ್ಲಿ ಕೆರೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ.
ಕೇರಳದ ವಯನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಕಬಿನಿ ಜಲಾಶಯಕ್ಕೆ 23,129 ಕ್ಯೂಸೆಕ್ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕಬಿನಿ ಜಲಾಶಯದಿಂದ ಗುರುವಾರ ತಡರಾತ್ರಿ 20,675 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.