ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅತಿ ತುರ್ತು ಗಂಜಿ ಕೇಂದ್ರಗಳ ಜೊತೆಗೆ ಗೋ ಶಾಲೆಗಳನ್ನೂ ಪ್ರಾರಂಭಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಆಯುಕ್ತರು ಪ್ರವಾಹ ಪೀಡಿತ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಗೋಶಾಲೆ ಪ್ರಾರಂಭಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ಮನವಿ ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆಯುಕ್ತರು, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಜನ ಮತ್ತು ಅದರ ಜತೆಗೆ ಜಾನುವಾರುಗಳಿಗೂ ತೊಂದರೆ ಉಂಟಾಗುತ್ತಿದೆ. ಜನರಿಗಾಗಿ ಜಿಲ್ಲಾಡಳಿತ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಅದೇ ರೀತಿ ಜಾನುವರುಗಳೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ ಎಲ್ಲೆಲ್ಲಿ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಗೋಶಾಲೆಗಳನ್ನೂ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.
ಗಂಜಿ ಕೇಂದ್ರಗಳಲ್ಲಿ ಗೋಶಾಲೆ ನಿರ್ಮಿಸಲು ಸಾಧ್ಯವಾಗಿಲ್ಲವಾದರೆ, ಗಂಜಿ ಕೇಂದ್ರದ ಸಮೀಪ ಗೋಶಾಲೆಗಳನ್ನು ನಿರ್ಮಿಸ ಬಹುದಾಗಿದೆ. ಈ ಗೋ ಶಾಲೆಗಳಿಗೆ ಬರುವ ಪಶುಗಳಿಗೆ ಮೇವು, ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸುವುದರ ಜತೆಗೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮಾರ್ಗಸೂಚಿ ಅನ್ವಯ ಸೂಕ್ತ ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದು ಮನವಿ ಸಲ್ಲಿಸಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ತಗುಲುವ ಸಾಧ್ಯತೆ ಇದ್ದು, ಗೋಶಾಲೆಗಳಲ್ಲಿ ಅವುಗಳನ್ನು ತಡೆಕಟ್ಟಲು ಮುಂಜಗ್ರತಾ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಈ ಹಿನ್ನೆಲೆ ಅತಿ ತುರ್ತಾಗಿ ಅಗತ್ಯಕ್ಕನುಸಾರವಾಗಿ ಗಂಜಿ ಕೇಂದ್ರಗಳ ಜತೆ ಗೋಶಾಲೆಗಳನ್ನೂ ಪ್ರಾರಂಭಿಸುವುದು ಉತ್ತಮ ಎಂದು ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಮೂಲಕ ಮನವಿ ಸಲ್ಲಿಸಿದ್ದಾರೆ.