ಬೆಂಗಳೂರು: ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಇಲಾಖೆಗಳಡಿ ಬರುವ 29 ಪ್ರಾದೇಶಿಕ ಮತ್ತು ಉಪ ವಿಭಾಗೀಯ ಕಚೇರಿಗಳನ್ನು ಪುನರ್ ರಚನೆ ಮಾಡುವುದರಿಂದ ಎನ್.ಟಿ.ಸಿ.ಎ, ಡಬ್ಲ್ಯೂ ಸಿಸಿಬಿ, ಎಫ್.ಎಸ್.ಐ ಮತ್ತು ಸಿ.ಝಡ್.ಎ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆಯಾಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಉಪ ವಿಭಾಗೀಯ ಕಚೇರಿಗಳನ್ನು ಪುನರ್ ರಚಿಸುವುದರಿಂದ ಅವುಗಳ ಸ್ವಾಯತ್ತತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ನಗರದ ಪರಿಸರವಾದಿ ಗಿರಿಧರ್ ಕುಲಕರ್ಣಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿ ಪುನರ್ ರಚನೆಯಿಂದ ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದು ಇಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಉದ್ದೇಶಿತ ಪುನರ್ ರಚನೆಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ, ಭಾರತೀಯ ಅರಣ್ಯ ಸಮೀಕ್ಷೆ ಮತ್ತು ಕೇಂದ್ರೀಯ ಮೃಗಾಲಯ ಪ್ರಾಧಿಕಾರಗಳ ಸ್ವಾಯತ್ತತೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ಇಲಾಖೆಗಳಡಿ ಬರುವ ಪ್ರಾದೇಶಿಕ ಕಚೇರಿಗಳನ್ನು ಆಡಳಿತಾತ್ಮಕ ಮತ್ತು ಸಿಬ್ಬಂದಿ ಪುನರ್ ರಚನೆ ದೃಷ್ಟಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರೂ, ಪುನರ್ ರಚನೆಯಾದಲ್ಲಿ ಈ ಸಂಸ್ಥೆಗಳನ್ನು ರೂಪಿಸಿರುವ ಉದ್ದೇಶವೇ ವ್ಯರ್ಥವಾಗಲಿದೆ. ಅಲ್ಲದೇ ಪುನರ್ ರಚನೆ ಉದ್ದೇಶ ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.