ಬೆಂಗಳೂರು: ಸರ್ಕಾರ ಅಭದ್ರ ಎಂದು ಹೇಳುವುದು ವಿಪಕ್ಷದವರ ಚಾಳಿ ಅಲ್ಲ. ಆಡಳಿತ ಪಕ್ಷದಲ್ಲಿರುವವರೇ ಸರ್ಕಾರ ಅಭದ್ರ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ದೋಸ್ತಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ಬರೋದಾದ್ರೆ ಅದು ಆಡಳಿತ ಪಕ್ಷದವರಿಂದಲೇ ಬರಬಹುದು. ಕಾಂಗ್ರೆಸ್ - ಜೆಡಿಎಸ್ ನಾಯಕರು ಮಧ್ಯಂತರ ಚುನಾವಣೆ ಬಗ್ಗೆ ಮಾತಾನಾಡುತ್ತಿದ್ದಾರೆ. ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡಿದ್ದಾರೆ. ಸಿದ್ದರಾಮಯ್ಯ ಅಹಿಂದ ಜಪ ಮಾಡ್ತಿದ್ದಾರೆ. ಮಧ್ಯಂತರ ಚುನಾವಣೆಯ ಮಾತುಗಳೆಲ್ಲಾ ಜೆಡಿಎಸ್-ಕಾಂಗ್ರೆಸ್ನವರ ರಾಜಕೀಯದಾಳ ಅಷ್ಟೇ. ಒಬ್ಬರನ್ನೊಬ್ಬರು ಬೆದರಿಸಲು ಈ ತರದ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಬಿಜೆಪಿಗೆ ಮಧ್ಯಂತರ ಚುನಾವಣೆ ಬೇಕಿಲ್ಲ. ಇವೆಲ್ಲಾ ಬ್ಲಾಕ್ ಮೇಲ್ ತಂತ್ರಗಾರಿಕೆ ಎಂದು ಟೀಕೆ ಮಾಡಿದರು.
ಮಾತು ಮುಂದುವರೆಸಿದ ಆಶೋಕ್, ನಾವು 105 ಶಾಸಕರಿದ್ದೇವೆ. ಅವರು ಹೇಳಿದಾಕ್ಷಣ ಮಧ್ಯಂತರ ಚುನಾವಣೆ ಮಾಡಲು ಆಗುವುದಿಲ್ಲ. ಅವರ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಾಗದೆ ಇದ್ದಾಗ ರಾಜ್ಯಪಾಲರು ನಮ್ಮನ್ನ ಒಂದು ಬಾರಿ ಸರ್ಕಾರ ರಚಿಸುವುದರ ಬಗ್ಗೆ ಕೇಳಬೇಕಾಗುತ್ತೆ. ರಾಜ್ಯಪಾಲರು ಸರ್ಕಾರ ರಚನೆ ಮಾಡಲು ಕೇಳಿದರೆ, ನಾವು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.