ಬೆಂಗಳೂರು: ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧವೇ ಕೇಂದ್ರ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ತ್ಯಾಗ ಮಾಡಿದವರು. ಇಂಥವರ ರಾಜಕೀಯದ ಮೇಲೆ ಮಸಿ ಬಳಿಯಲು ಬಿಜೆಪಿ ಸರ್ಕಾರ ಇಡಿ, ಸಿಬಿಐ ಬಳಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರದ ಮೇಲೆ ನಮ್ಮ ಇಬ್ಬರು ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಜೂ. 13 ರಂದು ರಾಹುಲ್ ಗಾಂಧಿ ಅವರು ಇಡಿ ಕಚೇರಿಗೆ ಹಾಜರ್ ಆಗ್ತಿದ್ದಾರೆ. ನಮ್ಮ ನಾಯಕರು ಹೆದರಲ್ಲ. ಜೈಲಿಗೆ ಹೋಗೋಕೂ ತಯಾರಿದ್ದಾರೆ. 13 ರಂದು ದೇಶಾದ್ಯಂತ ಕಾಂಗ್ರೆಸ್ ನಾಯಕರು ಇಡಿ ಕಚೇರಿಗಳ ಎದುರು ನಮ್ಮ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶಕ್ಕಾಗಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ, ಒಬ್ಬ ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರಿಗೆ ಆ ಸ್ಥಾನ ಬಿಟ್ಟು ಕೊಟ್ಟವರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ತ್ಯಾಗಕ್ಕೆ ಬಿಜೆಪಿ ಕಪ್ಪು ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಇಡಿ, ಸಿಬಿಐ ಮೂಲಕ ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಜೆಪಿಯವರು ತೊಂದರೆ ಕೊಡುತ್ತಿದ್ದಾರೆ. ಮುಚ್ಚಿಹೋಗಿದ್ದ ಪ್ರಕರಣವನ್ನು ಅನಗತ್ಯವಾಗಿ ತೆರೆದು ನಮ್ಮ ನಾಯಕರಿಗೆ ಕಿರುಕುಳ ಕೊಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಇದೇ 13ಕ್ಕೆ ಲಾಲ್ಬಾಗ್ನಿಂದ ಇಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದೇವೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಮೆರವಣಿಗೆ ಆರಂಭವಾಗಲಿದೆ ಎಂದು ಡಿಕೆಶಿ ವಿವರಿಸಿದರು.
ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಮಾತನಾಡಿ, ಬಿಜೆಪಿ ಸರ್ಕಾರದ ಜವಾಬ್ದಾರಿ, ಶಾಂತಿ ಕಾಪಾಡಬೇಕು. ಕರ್ನಾಟಕದಲ್ಲಿ ನಾನು ಎಲ್ಲರಲ್ಲಿ ಕೈ ಜೋಡಿಸಿ ಮನವಿ ಮಾಡುತ್ತೇನೆ. ಯಾರೂ ಪ್ರಚೋದನೆಗೆ ಕಿವಿಗೊಡಬಾರದು. ಶಾಂತಿ ಕಾಪಾಡಬೇಕು. ಕರ್ನಾಟಕ ಶಾಂತಿಯ ತೋಟ. ಎಲ್ಲರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದು ಹೇಳಿದರು.