ಬೆಂಗಳೂರು: ನೂರಾರು ಜನರಿಂದ ಚೀಟಿ ಹಣ ಕಟ್ಟಿಸಿಕೊಂಡು ಕೋಟ್ಯಂತರ ರೂ. ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಿಸಿ ಫ್ರೀಡಂಪಾರ್ಕ್ ಮುಂಭಾಗ ಹಣ ಕಳೆದುಕೊಂಡವರು ಪ್ರತಿಭಟನೆ ನಡೆಸಿದರು.
ಗಿರಿನಗರ ಹಾಗೂ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವು ವರ್ಷಗಳಿಂದ ಜ್ಞಾನೇಶ್-ಲೀಲಾವತಿ ದಂಪತಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ನೂರಾರು ಜನ ಇವರ ಬಳಿ ಚೀಟಿ ಕಟ್ಟಿದ್ದರು. ಚೀಟಿ ಮುಗಿದರೂ ಕೂಡ ಹಣ ನೀಡದೇ ಯಾಮಾರಿಸುತ್ತಿದ್ದ ಹಿನ್ನೆಲೆ ಜ್ಞಾನೇಶ್ ದಂಪತಿಯನ್ನು ಕಳೆದ ತಿಂಗಳು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಅದರೆ ಜ್ಞಾನೇಶ್ ಅಳಿಯ ರವಿಕುಮಾರ್, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಬರಹಗಾರನಾಗಿ ಕೆಲಸ ಮಾಡುತ್ತಿದ್ದು, ಇನ್ನೂ ರವಿಕುಮಾರ್ನನ್ನು ಬಂಧಿಸಿಲ್ಲ. ಹೀಗಾಗಿ ರವಿಕುಮಾರ್ನನ್ನು ಕೂಡಲೇ ಬಂಧಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಹಣ ಕಳೆದುಕೊಂಡ ಮಹಿಳೆ ಮಂಜುಳಾ ಮಾತನಾಡಿ, ನಾವು ಇವರನ್ನೇ ನಂಬಿಕೊಂಡು ಇದ್ದೇವೆ. ಮಗಳ ಮದುವೆಗೆ ಹಣ ಇಟ್ಟಿದ್ದೆ. ಇದುವರೆಗೆ ಚೀಟಿ ಹೆಸರಿನಲ್ಲಿ 40 ಲಕ್ಷ ರೂ. ಹಣ ಕೊಟ್ಟಿದ್ದೆ. ಇದುವರೆಗೂ ಹಣ ವಾಪಸ್ ಕೊಟ್ಟಿಲ್ಲ. ಇತ್ತ ಮಗಳ ಮದುವೆ ಮಾಡುವುದಕ್ಕೆ ಹಣವಿಲ್ಲ. ನಾಲ್ಕು ವರ್ಷದಿಂದ ವ್ಯವಹಾರ ಮಾಡುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.