ಬೆಂಗಳೂರು :ಈ ರೋಹಿತ್ ಚಕ್ರತೀರ್ಥ ಯಾರು? ಇವರ ಅರ್ಹತೆ ಏನು? ಬರಗೂರು ರಾಮಚಂದ್ರಪ್ಪ ಅವರ ಅರ್ಹತೆ ಹಾಗೂ ಇವರ ಅರ್ಹತೆಯನ್ನು ನೀವೇ ತುಲಾಭಾರ ಮಾಡಿ. ಇವರ ಅರ್ಹತೆ ಬಗ್ಗೆ ಪ್ರಶ್ನೆ ಮಾಡಿದರೆ ಸರ್ಕಾರ ಮಂತ್ರಿಗಳು ಯಾಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರು ಐಐಟಿ ಪ್ರೋಫೆಸರ್ ಆಗಿದ್ದಾರೆ ಎಂದು ಸಚಿವರು ಹೇಳುತ್ತಿದ್ದಾರೆ. ಟ್ಯೂಷನ್ ಟೀಚರ್ ಆದರೆ ಸಮಿತಿಗೆ ನೇಮಿಸುತತೀರಾ? ಈ ಸರ್ಕಾರಕ್ಕೆ ಮಾನದಂಡ ಬೇಡವೇ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ, ಎರಡೂವರೆ ವರ್ಷ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಮಾಡಿದ್ದರು. ಸಂವಿಧಾನದ ತತ್ವಕ್ಕೆ ಅನುಗುಣವಾಗಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಠ್ಯ ಪರಿಷ್ಕರಣೆ ಮಾಡಿದ್ದಾರೆ.
ಶಿಕ್ಷಣ ವ್ಯವಸ್ಥೆಯ ಕುತ್ತಿಗೆ ಹಿಸುಕುವ ಕಾರ್ಯವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಹಲವು ಮಾನದಂಡಗಳಿಂದ 27 ಉಪ ಸಮಿತಿ ಮಾಡಿ 30ಕ್ಕೂ ಹೆಚ್ಚು ತತ್ವಜ್ಞಾನಿ, ಉಪಾಧ್ಯಾಯರು, ವಿಜ್ಞಾನಿಗಳು ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಜತೆ ಚರ್ಚೆ ಮಾಡಿ, ನಂತರ ಸಚಿವರು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಜಾರಿಗೆ ತರಲಾಗಿತ್ತು ಎಂದರು.
ಟ್ರೋಲ್ ಮಾಡುವವರು ಅಧ್ಯಕ್ಷರಾಗುತ್ತಾರಾ?:ಬರಗೂರು ರಾಮಚಂದ್ರಪ್ಪ ಅವರ ಅರ್ಹತೆ ಹಾಗೂ ರೋಹಿತ್ ಚಕ್ರತೀರ್ಥ ಅರ್ಹತೆಯನ್ನು ನೀವೇ ತುಲನೆ ಮಾಡಿ. ಐಐಟಿಗೆ ಕೋಚಿಂಗ್ ಕೊಡುವ ಮತ್ತು ಬಿಜೆಪಿಯ ಎರಡು ರೂಪಾಯಿಗೆ ಇತರರನ್ನು ಟ್ರೋಲ್ ಮಾಡುವವರನ್ನು ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇವರು ಪಠ್ಯವನ್ನು ಯಾವ ಕಾರಣಕ್ಕೆ ಕೈಬಿಟ್ಟಿದ್ದಾರೆ ಎಂಬುದನ್ನು ಹೇಳಲಿ. ಸಾಮಾಜಿಕ ನ್ಯಾಯ ಇರಲಿಲ್ಲವೇ ಅಥವಾ ಸಂವಿಧಾನದ ಆಶಯ ಇರಲಿಲ್ಲವೇ, ಯಾವುದರ ಕೊರತೆ ಇತ್ತು? ಎಂಬುದನ್ನು ಹೇಳಲಿ ಎಂದರು.
ಯಾವುದೇ ಸಮಿತಿಯಲ್ಲಿ ಒಂದೇ ಜಾತಿಯವರು ಇದ್ದರೆ ವಿಭಿನ್ನತೆ ಕಾಪಾಡಲು, ಸಾಮಾಜಿಕ ನ್ಯಾಯ ನೀಡಲು ಸಾಧ್ಯವೇ? ಒಂದೇ ದೃಷ್ಟಿಕೋನದಲ್ಲಿ ಸಮಿತಿ ರಚಿಸಿ, ಒಂದೇ ತತ್ವವನ್ನು ನಮ್ಮ ಸಮಾಜದ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಇದು ಆರ್‌ಎಸ್ಎಸ್ ಸಿದ್ಧಾಂತವಾಗಿದೆ. ಈ ಸಮಿತಿಯಲ್ಲಿ ಓರ್ವ ವಿಜ್ಞಾನಿ, ಶಿಕ್ಷಣ ತಜ್ಞ ಇದ್ದಾರಾ? ನಾವು ಪರಿಷ್ಕರಣೆ ವಿರುದ್ಧವಾಗಿಲ್ಲ. ಬದಲಾವಣೆ ಅಗತ್ಯ. ಆದರೆ, ವೈಜ್ಞಾನಿಕ ಮನೋಭಾವನೆ ಕೊಲ್ಲಲು, ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಮರೆಮಾಚುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ ಎಂದರು.
ಇದನ್ನೂ ಓದಿ:ಓವೈಸಿ ರಾಷ್ಟ್ರಭಕ್ತಿಯನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಕು: ಕೆ.ಎಸ್. ಈಶ್ವರಪ್ಪ