ಬೆಂಗಳೂರು:ರಾಜ್ಯದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಎಲ್ಲ ರೈತರಿಗೂ ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತದೆ. ಮಾರ್ಚ್ 12ಕ್ಕೆ ಈ ಯೋಜನೆಗೆ ಚಾಲನೆ ನೀಡಲಿದ್ದು, ಅಂದು 45 ಲಕ್ಷ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯಾದ್ಯಂತ 700ಕ್ಕೂ ಹೆಚ್ಚು ಜನಸೇವಾ ಕೇಂದ್ರಗಳಿಂದ ರೈತರಿಗೆ ವಿವಿಧ ಸೇವೆ ಕೊಡಲಾಗುತ್ತಿದೆ. ಪಹಣಿ, ಮ್ಯುಟೇಷನ್ ಇತ್ಯಾದಿ ನೀಡಲಾಗುತ್ತಿದೆ. ಇದಕ್ಕೆ ಕನಿಷ್ಠ ದರವಾಗಿ 15 ರೂ. ಶುಲ್ಕ ಪಡೆಯಲಾಗುತ್ತಿದೆ. ಡೇಟಾ ವೆಚ್ಚ, ಪರಿಕರ ವೆಚ್ಚಗಳನ್ನು ನಿಭಾಯಿಸಲ ಈ ಹಣ ಪಡೆಯಲಾಗುತ್ತಿದೆ. ಆನ್ ಲೈನ್ನಲ್ಲೇ ನೋಡಲು ಶುಲ್ಕವಿಲ್ಲ. ಆದರೆ, ಪಹಣಿ, ಮ್ಯುಟೇಷನ್ ಇತ್ಯಾದಿ ಪ್ರಿಂಟ್ ಪ್ರತಿ ಪಡೆಯಲು ಶುಲ್ಕ ಪಡೆಯಲಾಗುತ್ತದೆ ಎಂದರು.
ರೈತರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ. ಆದರೆ, ಮಾರ್ಚ್ 12ರಂದು ರೈತರ ಪಹಣಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರವನ್ನು ಕವರ್ನಲ್ಲಿ ಹಾಕಿ 45 ಲಕ್ಷ ರೈತರ ಮನೆ ಬಾಗಿಲಿಗೆ ನಾವೇ ತಲುಪಿಸಲಿದ್ದೇವೆ. ಇದನ್ನೆಲ್ಲಾ ಉಚಿತವಾಗಿ ಕೊಡಲಿದ್ದೇವೆ. ಐದು ವರ್ಷಕ್ಕೊಮ್ಮೆ ರೈತರಿಗೆ ಇವೆಲ್ಲಾ ದಾಖಲೆ ಉಚಿತವಾಗಿ ಕೊಡಬೇಕು ಎಂದು ಕಾನೂನಿನಲ್ಲೇ ಇದೆ. ಈಗ ನಾವು ಡಿಸಿ, ಎಸಿ, ತಹಶೀಲ್ದಾರರು ಮೂಲಕ ಮನೆ ಬಾಗಿಲಿಗೆ ಹೋಗಲಿದ್ದೇವೆ. ಸಿಎಂ, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶೀಘ್ರ ಹೊಸ ಯೋಜನೆ ಘೋಷಣೆ:ಪ್ರಸ್ತುತಸರ್ವೇ ರೆವೆನ್ಯೂ ನಕ್ಷೆ ಮಾಡಲು ನಾಲ್ಕೈದು ತಿಂಗಳಾಗಲಿದೆ. ಇದನ್ನು ತಪ್ಪಿಸಿ ತ್ವರಿತವಾಗಿ ಮಾಡಲು ಹೊಸ ಯೋಜನೆ ತರುತ್ತಿದ್ದೇವೆ. ಇದರಿಂದ ರೈತರೇ ಜಮೀನನ್ನು ಹೇಗೆ ಭಾಗ ಮಾಡಿಕೊಳ್ಳಬೇಕು ಎಂದು ನಿರ್ಧರಿಸಬಹುದಾಗಿದೆ. ಜಮೀನಿನ ಭಾಗ ಮಾಡಿಕೊಳ್ಳಬಹುದು. ಸರ್ಕಾರ ಜಮೀನಿನ ಗಡಿ ಮಾತ್ರ ಗುರುತಿಸಲಿದೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.
ರೈತರೇ ನಕ್ಷೆ ಮಾಡಿಕೊಂಡು ಸಲ್ಲಿಸಿದರೆ, ನಾವು ವೆಬ್ಸೈಟ್ಗೆ ಅಪ್ಲೋಡ್ ಮಾಡಲಿದ್ದೇವೆ. ಇಂತಹ ಸಾಫ್ಟ್ವೇರ್ ಈಗ ಸಿದ್ಧವಾಗುತ್ತಿದೆ. ಸದ್ಯದಲ್ಲೇ ಈ ಯೋಜನೆ ಘೋಷಣೆ ಮಾಡಲಾಗುತ್ತದೆ ಎಂದು ವಿವರಿಸಿದರು.