ಬೆಂಗಳೂರು :ರಾಜ್ಯದ ಕಾರಾಗೃಹಗಳಲ್ಲಿನ ಖೈದಿಗಳಿಗೆ ಕೊರೊನಾ ಸೋಂಕು ಹರಡದಂತೆ ತಡೆಯುವುದೇ ಜೈಲಾಧಿಕಾರಿಗಳಿಗೆ ಸವಾಲೆನಿಸಿದೆ. ಎಷ್ಟೇ ಮುಂಜಾಗ್ರತಾ ಕ್ರಮಕೈಗೊಂಡ್ರೂ ಕೋವಿಡ್ ಇನ್ನಿಲ್ಲದಂತೆ ಕಾಡುತ್ತಿದೆ. ಇದರ ನಡುವೆಯೂ ನಗರದ ಪರಪ್ಪನ ಅಗ್ರಹಾರ ಜೈಲು ಇತರೆ ಕಾರಾಗೃಹಗಳಿಗೆ ಮಾದರಿಯಾಗಿದೆ.
ದೇಶದ ವಿವಿಧ ಜೈಲಿನಲ್ಲಿ ಸಾವಿರಾರು ಖೈದಿಗಳಿಗೆ ಕೊರೊನಾ ಸೋಂಕು ಆವರಿಸಿ ಈ ಪೈಕಿ ನೂರಾರು ಖೈದಿಗಳು ಜೈಲಿನಲ್ಲೇ ಸಾವನ್ನಪ್ಪಿರುವುದು ವರದಿಯಾಗಿತ್ತು. ಹರಿಯಾಣ, ದೆಹಲಿ ಸೇರಿ ಹಲವು ರಾಜ್ಯಗಳು ನಿಗದಿತ ಕಾಲಾವಧಿ ಖೈದಿಗಳನ್ನು ಬಿಡುಗಡೆ ಸಹ ಮಾಡಿದ್ದವು.
ರಾಜ್ಯದಲ್ಲಿ ಕೊರೊನಾ ಆರ್ಭಟಕ್ಕೂ ಮುನ್ನ 5 ಸಾವಿರಕ್ಕೂ ಹೆಚ್ಚಿರುವ ಪರಪ್ಪನ ಅಗ್ರಹಾರದ ಕಾರಾಗೃಹದ ಸಜಾಬಂಧಿಗಳ ಮನದಲ್ಲಿಯೂ ನಡುಕು ಶುರುವಾಗಿತ್ತು. ಸೋಂಕು ಬರದಂತೆ ತಡೆಗಟ್ಟುವುದೇ ಜೈಲಾಧಿಕಾರಿಗಳಿಗೆ ಹೊಸ ಸವಾಲಾಗಿತ್ತು. ಇನ್ನೊಂದೆಡೆ ಕೊರೊನಾ ಮಾರ್ಗಸೂಚಿಯನ್ನು ಜೈಲಿನಲ್ಲಿ ಸಮಗ್ರವಾಗಿ ಅನುಷ್ಠಾನ ಮಾಡಿದ್ದರಿಂದ ಹೇಳಿಕೊಳ್ಳುವಂತಹ ಸಮಸ್ಯೆ ಉದ್ಭವವಾಗಿಲ್ಲ.
ಪರಪ್ಪನ ಅಗ್ರಹಾರ ಜೈಲು 3,500 ಖೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ 4,953 ಪುರುಷರು, 197 ಮಹಿಳೆಯರು ಸೇರಿ 5 ಸಾವಿರಕ್ಕೂ ಅಧಿಕ ಖೈದಿಗಳನ್ನು ಜೈಲಿನಲ್ಲಿರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 58 ಕಾರಾಗೃಹಗಳಿವೆ. ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ, 1 ಬಯಲು ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಾಗೃಹಗಳಿವೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 15,120 ಖೈದಿಗಳಿದ್ದಾರೆ. ಅದರಲ್ಲಿ ವಿಚಾರಣಾಧೀನ ಖೈದಿಗಳು 11,444, ಸಜಾ ಕೈದಿಗಳು 3,899 ಮಂದಿ ಇದ್ದಾರೆ.
ಈವರೆಗೆ ಸುಮಾರು 2,665 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಒಟ್ಟು 303 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇವರ ಜೊತೆಗೆ ಸಂಪರ್ಕಿತ ಖೈದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೊಸ ಖೈದಿಗಳ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ್ರೆ ಮಾತ್ರ ಜೈಲಿನೊಳಗೆ ಸೇರಿಸಲು ಅನುಮತಿ ನೀಡಲಾಗಿದೆ.
ರಾಜ್ಯದ ಕಾರಾಗೃಹಗಳಲ್ಲಿ 585 ಪಾಸಿಟಿವ್ ಕೇಸ್ ಪತ್ತೆಯಾಗಿದ್ದವು. ಎಲ್ಲರೂ ರಿಕವರಿ ಆಗಿದ್ದಾರೆ.. ಸದ್ಯ 83 ಪಾಸಿಟಿವ್ ಪ್ರಕರಣ ಸಕ್ರಿಯವಾಗಿವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಈವರೆಗೂ 3509 ಮಂದಿಗೆ ಕೋವಿಡ್ ತಪಾಸಣೆ ಮಾಡಿಸಲಾಗಿದೆ. ಈ ಪೈಕಿ 6 ಮಂದಿಯಲ್ಲಿ ಸೋಂಕು ಕಾಣಿಸಿತ್ತು. ಸದ್ಯ ಜೈಲಿನಲ್ಲಿ 32 ಪಾಸಿಟಿವ್ ಕೇಸ್ ಸಕ್ರಿಯವಾಗಿವೆ.
ಖೈದಿಗಳ ಭೇಟಿಗೆ ನಿತ್ಯ ಆಗಮಿಸುವ ಪೋಷಕರಿಗೆ ಹಾಗೂ ಅವರ ಸಂಬಂಧಿಕರಿಗೆ ವಿಸಿಟರ್ ರೂಂ ಪ್ರವೇಶಿಸುವ ಮುನ್ನ ಔಷಧಿ ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಸಜಾಬಂಧಿಗಳಿಗೆ ಆರೋಗ್ಯದಲ್ಲಿ ವ್ಯತ್ಯಯ ಬಂದರೆ ಕೂಡಲೇ ಜೈಲಿನ ವೈದ್ಯರು ಸೂಕ್ತ ವೈದ್ಯಕೀಯ ತಪಾಸಣೆ, ಸೋಂಕಿನ ಗುಣಲಕ್ಷಣ ಕಂಡು ಬಂದ್ರೆ ಪ್ರತ್ಯೇಕ ಬ್ಯಾರಕ್‌ನಲ್ಲಿರಿಸಲಾಗುತ್ತಿದೆ. ಸೆಂಟ್ರಲ್ ಜೈಲಿನಲ್ಲಿರುವ ಆಂತರಿಕ ಎಫ್ಎಂ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.