ಬೆಂಗಳೂರು:ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ವಿಚಾರ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರ ಸಭೆ ಕರೆದಿದ್ದಾರೆ. ಅನರ್ಹ ಶಾಸಕ ಆನಂದ್ ಸಿಂಗ್ಗೂ ಸಿಎಂ ಆಹ್ವಾನ ನೀಡಿದ್ದಾರೆ.
ಅಕ್ಟೋಬರ್ 2ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಕುರಿತು ಮಹತ್ವದ ತೀರ್ಮಾನ ಮಾಡಲಾಗುತ್ತದೆ.
ಬಳ್ಳಾರಿ ಕುರಿತು ಸಭೆ ಕರೆದ ಸಿಎಂ ಈಗಾಗಲೇ ಬಳ್ಳಾರಿಯನ್ನು ಎರಡು ಭಾಗ ಮಾಡುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಳ್ಳಾರಿಯ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಂದು ಆ ಎಲ್ಲಾ ಶಾಸಕರ ಜೊತೆ ಸಭೆ ನಡೆಸಿ, ವಿಜಯನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಬಗ್ಗೆ ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಅನರ್ಹ ಶಾಸಕ ಆನಂದ್ ಸಿಂಗ್ಗೂ ಆಹ್ವಾನ:
ಸಂಸದ ದೇವೇಂದ್ರಪ್ಪ, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಭೀಮಾ ನಾಯ್ಕ್, ಗಣೇಶ, ಸೋಮಲಿಂಗಪ್ಪ, ನಾಗೇಂದ್ರ, ಸೋಮಶೇಖರ ರೆಡ್ಡಿ, ತುಕಾರಾಂ, ಗೋಪಾಲಕೃಷ್ಣ, ಕರುಣಾಕರ ರೆಡ್ಡಿ, ಅನರ್ಹ ಶಾಸಕ ಆನಂದ್ ಸಿಂಗ್, ಪರಿಷತ್ ಸದಸ್ಯ ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಶರಣಪ್ಪ ಮಟ್ಟೂರು ಹಾಗೂ ಚಂದ್ರಶೇಖರ್ ಪಾಟೀಲ್ ಅವರಿಗೆ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.