ಬೆಂಗಳೂರು: ಕೋರ್ಟ್ ವಿಚಾರಣೆ ವಿಚಾರವಾಗಿ ಮಾತಾಡಿಕೊಂಡಿದ್ದೇವೆ, ಬಿಜೆಪಿ ವಿರುದ್ಧ ನಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.
ನಗರದ ದೇವಪ್ರಿಯ ಬ್ರಿಗೇಡ್ ಪ್ಯಾಲೇಸ್ ಅಪಾರ್ಟ್ಮೆಂಟ್ನಲ್ಲಿ ಸಭೆ ನಡೆಸಿ, ಬಳಿಕ ಮಾತನಾಡಿದ ಅವರು, ಶೀಘ್ರವಾಗಿ ಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿ ಅಂತ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದೇವೆ. ಈ ಸಂಬಂಧ ಮುಂದಿನ ಆಗು ಹೋಗುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಿಂದ ಸೂಕ್ತ ಸ್ಪಂದನೆ ಸಿಕ್ತಿಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ನಮಗೆ ಏಕೆ ಸ್ಪಂದನೆ ಸಿಗಬೇಕು, ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿವೆ. ಸಿಎಂ ಭೇಟಿ ಮಾಡಿ ಕೆಲಸಗಳ ಬಗ್ಗೆ ಮಾತನಾಡುತ್ತಿದ್ದೇವೆ. ಶಾಸಕ ಸ್ಥಾನ ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗಿಲ್ಲ. ಅನರ್ಹರಾದರೂ ಕ್ಷೇತ್ರದ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸಿಎಂ ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಬೇಡ. ಜೆಡಿಎಸ್ನಿಂದ ಬಿಜೆಪಿಗೆ ಯಾರಾದರೂ ಬರಲಿ, ಅದು ಆ ಶಾಸಕರಿಗೆ ಬಿಟ್ಟಿದ್ದು. ನಾವು ಜೆಡಿಎಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ತುರ್ತಾಗಿ ಅರ್ಜಿಯನ್ನ ಏಕೆ ಕೈಗೆತ್ತಿಕೊಳ್ಳಬೇಕು ಎಂದು ನಿನ್ನೆ ಸುಪ್ರೀಂ ಕೋರ್ಟ್ ಪ್ರಶ್ನಿಸಿರುವುದರಿಂದ ಅನರ್ಹ ಶಾಸಕರ ಆತಂಕ, ಗೊಂದಲ ಹೆಚ್ಚಾಗಿದೆ. ಇದಕ್ಕಾಗಿಯೇ ಇಂದು ಅನರ್ಹ ಶಾಸಕರು ಡಾ.ಸುಧಾಕರ್ಗೆ ಸೇರಿದ ಅಪಾರ್ಟ್ಮೆಂಟ್ನಲ್ಲಿ ದಿಢೀರ್ ಸಭೆ ನಡೆಸಿ ಮುಂದಿನ ನಡೆ, ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಅನರ್ಹ ಶಾಸಕರಾದ ಡಾ. ಸುಧಾಕರ್, ಎಂಟಿಬಿ ನಾಗರಾಜ್, ಬಿ.ಸಿ ಪಾಟೀಲ್, ಮುನಿರತ್ನ, ರೋಷನ್ ಬೇಗ್, ಪ್ರತಾಪ್ ಗೌಡ ಪಾಟೀಲ್ ಭಾಗಿಯಾಗಿದ್ದರು. ಸಭೆಯಲ್ಲಿ ಅರ್ಜಿ ವಿಚಾರಣೆ ವಿಳಂಬದ ಕುರಿತು ಹಾಗೂ ಭವಿಷ್ಯದಲ್ಲಿ ಏನು ಮಾಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆಸಿದರು. ಅಲ್ಲದೇ ಬಿಜೆಪಿ ಧೋರಣೆ ಬಗ್ಗೆನೂ ಅನರ್ಹ ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಜೆಡಿಎಸ್ನಿಂದ ಬಂದ ಶಾಸಕರಿಗೆ ಬಿಜೆಪಿ ನಾಯಕರು ಮಣೆ ಹಾಕಿದರೆ ತಮ್ಮ ಗತಿಯೇನು? ಸರ್ಕಾರ ರಚನೆಗೆ ಮೊದಲು ಕೊಟ್ಟಿದ್ದ ಆಶ್ವಾಸನೆಗಳನ್ನು ಬಿಜೆಪಿ ನಾಯಕರು ಈಡೇರಿಸುತ್ತಿಲ್ಲ, ಈ ಎಲ್ಲ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಾಯಿತು.