ಬೆಂಗಳೂರು: ಕೋವಿಡ್ ಉಪಕರಣ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಳ್ಳಿ ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ತನಿಖೆ ಬೇಕಾದರು ನಡೆಸಲಿ. ಸಿಬಿಐ ತನಿಖೆ ಬೇಕಾದ್ರು ಮಾಡಿಸಲಿ. ಕೋವಿಡ್ -19 ವಿಚಾರವಾಗಿ ಭ್ರಷ್ಟಾಚಾರ ನಡೆಸಿದ್ದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರೋಕೆ ನಾಲಾಯಕ್. ಈ ಮಾತನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳುವ ಮೊದಲು ನಾನೇ ಹೇಳ್ತೇನೆ. ನಾವು ಪ್ರತಿಯೊಂದು ಉಪಕರಣಗಳ ಖರೀದಿಯ ಲೆಕ್ಕ ಕೊಡುತ್ತೇವೆ. ನಾವು ಎಲ್ಲೂ ಓಡಿಹೋಗಲ್ಲ. ಒಂದು ಎರಡು ತಿಂಗಳು ಪ್ರತಿಪಕ್ಷಗಳು ಸಹಕಾರ ನೀಡಲು ಸಾಧ್ಯವಾಗುವುದಿಲ್ಲವಾ ಎಂದು ಪ್ರಶ್ನಿಸಿದರು.
ಇಂಥಹ ಸಂದರ್ಭದಲ್ಲಿ ರಾಜಕಾರಣ ಮಾಡಬೇಕಾ? ಕೋವಿಡ್-19 ಮೆಡಿಕಲ್ ಉಪಕರಣಗಳನ್ನು ಸರ್ಕಾರದ ಹಿರಿಯ ಅಧಿಕಾರಿಗಳು ಬೆಲೆ ನಿರ್ಧರಿಸಿದ ಬಳಿಕವೇ ಖರೀದಿ ಮಾಡಿದ್ದಾರೆ. ಕೊರೊನಾ ರೋಗ ಬಂದ ಸಂದರ್ಭದಲ್ಲಿ ಉಪಕರಣಗಳ ಕೊರತೆ ಇತ್ತು. ಆ ಸಂದರ್ಭದಲ್ಲಿ ಉಪಕರಣಗಳು ಸಿಕ್ಕರೇ ಸಾಕಾಗಿತ್ತು. ಕೇಂದ್ರ ಸರ್ಕಾರಕ್ಕೆ ಉಪಕರಣಗಳು ಸಿಗುತ್ತಿರಲಿಲ್ಲ. ಅದಕ್ಕಾಗಿ ಕೆಲವು ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಿರಬಹುದು ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಈ ತರದ ಆರೋಪವನ್ನು ನಿರೀಕ್ಷಿಸಿರಲಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಈ ಆರೋಪ ದುರದೃಷ್ಟಕರ. ಪ್ರತಿ ನಯಾ ಪೈಸೆಗೂ ಲೆಕ್ಕ ಕೊಡ್ತಿವಿ. ದರ ಫಿಕ್ಸ್ ಮಾಡಿರೋದು, ತಂದಿರೋದು ಉನ್ನತ ಮಟ್ಟದ ಅಧಿಕಾರಿಗಳು ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು.