ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವತ್ತಿದ್ದರೂ ನಮ್ಮ ನಾಯಕರೇ, ಅವರ ಮೇಲಿನ ನಮ್ಮ ವಿಶ್ವಾಸ ಎಂದಿಗೂ ಕಡಿಮೆಯಾಗುವುದಿಲ್ಲ. ನಾಯಕತ್ವ ಬದಲಾವಣೆ ಕೇವಲ ಊಹಾಪೋಹ ಮಾತ್ರ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ, ಯಾವತ್ತಿದ್ದರೂ ಬಿಎಸ್ವೈ ನಮ್ಮ ನಾಯಕ: ರೇಣುಕಾಚಾರ್ಯ - ಯಡಿಯೂರಪ್ಪಗೆ ಬೆಂಬಲ
ನಾಯಕತ್ವ ಬದಲಾವಣೆ ಇಲ್ಲ. ಯಡಿಯೂರಪ್ಪ ಯಾವತ್ತಿದ್ದರೂ ನಮ್ಮ ನಾಯಕರೇ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ.
ಬದ್ಧತೆಯಿಂದ ಪಕ್ಷ ಸಂಘಟನೆ ಬಗ್ಗೆ ಇರುವ ಇಚ್ಛಾಶಕ್ತಿ ಮತ್ತು ಬಡವರ ಪರವಾಗಿ, ಎಲ್ಲಾ ವರ್ಗದ ಪರವಾಗಿ ಉತ್ತಮ ಆಡಳಿತ ಕೊಡುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪನವರ ಬಗ್ಗೆ ಅಪಾರವಾದ ಗೌರವ, ಪ್ರೀತಿ ವಿಶ್ವಾಸವಿದೆ. ಯಡಿಯೂರಪ್ಪ ಯಾವತ್ತೂ ನಮ್ಮ ನಾಯಕ, ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಡುತ್ತಾರೆ ಎಂದು ಯಾರು ಹೇಳಿದ್ದಾರೆ? ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಶಾ, ಅರುಣ್ ಸಿಂಗ್ ಯಾರು ಹೇಳಿದ್ದಾರೆ? ಇದುವರೆಗೂ ನಾಯಕತ್ವ ಬದಲಾವಣೆ ಇಲ್ಲ ಎಂದೇ ಎಲ್ಲರೂ ಹೇಳಿದ್ದಾರೆ. ಪಕ್ಷದ ಕೋರ್ ಕಮಿಟಿ ಸಭೆಯಲ್ಲಿಯೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇದನ್ನೇ ಹೇಳಿದ್ದಾರೆ. ರಾಜ್ಯಾಧ್ಯಕ್ಷರು ಹತ್ತಾರು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ ಎಂದು ನಾಯಕತ್ವ ಬದಲಾವಣೆ ವಿಷಯವನ್ನು ತಳ್ಳಿಹಾಕಿದರು.
(ನಾಯಕತ್ವ ಬದಲಾವಣೆ ವಿಚಾರ: ಸಿಎಂಗಿಂತ ನಾನೇನ್ ದೊಡ್ಡವನಾ ಎಂದ ರೇಣುಕಾಚಾರ್ಯ..!)
ಕೇಂದ್ರ ಸಚಿವರ ಭೇಟಿ:
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನೂತನವಾಗಿ ಮೋದಿ ಸಚಿವ ಸಂಪುಟಕ್ಕೆ ಸೇರಿರುವ ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ಖೂಬಾ ಅವರನ್ನು ಭೇಟಿ ಮಾಡಿದ್ದೇನೆ. ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿ ಕಾರ್ಯಗಳು ಬಾಕಿ ಇದ್ದವು. ಅವುಗಳ ಬಗ್ಗೆ ಚರ್ಚಿಸಿದ್ದೇನೆ. ಮುಂದಿನ ವಾರ ಮತ್ತೆ ಬರುವುದಾಗಿ ಹೇಳಿದ್ದೇನೆ. ಕೆಲವು ಯೋಜನೆಗಳು ಬಾಕಿ ಉಳಿದಿವೆ. ಈಗಾಗಲೇ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಅದಕ್ಕೆ ಒಪ್ಪಿಗೆ ಕೊಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.